ರನ್ನ ಬೆಳಗಲಿ: ಸೆ. ೦೨: ಮುಧೋಳ ತಾಲೂಕಿನ ರನ್ನ ಬೆಳಗಲಿ ಪಟ್ಟಣದ ಸದಾಶಿವನಗರದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಸಹಾಯಕ ಅಡುಗೆದಾರರ ಎರಡು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶಾಲೆಯ ಪ್ರಕಟಣೆಯ ಪ್ರಕಾರ, ಹಿಂದುಳಿದ ವರ್ಗಕ್ಕೆ ಒಂದು ಹುದ್ದೆ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಒಂದು ಹುದ್ದೆ ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ?೪,೬೦೦ ಗೌರವಧನ ನೀಡಲಾಗುವುದು.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ೨೦೨೬ರ ಸೆಪ್ಟೆಂಬರ್ ೯ರೊಳಗೆ ಶಾಲಾ ಕಚೇರಿಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು ಎಂದು ಮುಖ್ಯೋಪಾಧ್ಯಾಯ ಎನ್. ಗೋಪಾಲ ಪತ್ರಿಕೆಗೆ ತಿಳಿಸಿದ್ದಾರೆ.
ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಸಂಕ್ರಟ್ಟಿ ಮಾತನಾಡಿ, ಸಹಾಯಕ ಅಡುಗೆದಾರರ ಆಯ್ಕೆಯಲ್ಲಿ ಅನುಭವಿ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಮೀಸಲಾದ ಹುದ್ದೆಗಳಿಗೆ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ನಿಗದಿತ ಕಾಲಾವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.