ಎಂ.ಕೆ.ಹುಬ್ಬಳ್ಳಿ: ಗ್ರಾಮೀಣ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹತ್ವದ ಕೊಡುಗೆ ನೀಡಿದೆ ಎಂದು ಕಿತ್ತೂರು ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಅಭಿಪ್ರಾಯಪಟ್ಟರು. ಅವರು ಕಿತ್ತೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯತ ಹಾಗೂ ಪಟ್ಟಣದ ಕೆರೆ ಸಮಿತಿ ಸಹಯೋಗದಲ್ಲಿ ಪಟ್ಟಣದಲ್ಲಿ 978 ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಲಾದ ತುಂಬು ಕೆರೆ ಹಸ್ತಾಂತರ ಹಾಗೂ ಬಾಗಿನ ಅರ್ಪಣೆ ಸಮಾರಂಭದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿ
ಸೇವೆಯೇ ಧರ್ಮ ಎಂಬ ತತ್ವದ ಮೇಲೆ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಫಲವಾಗಿ ಗ್ರಾಮೀಣ ಜನತೆಯಲ್ಲಿ ಸ್ವಾವಲಂಬನೆಯ ಭಾವನೆ ಮೂಡಿದೆ. ಧರ್ಮಸ್ಥಳ ಯೋಜನೆಯು ಕೇವಲ ಒಂದು ಸಂಸ್ಥೆಯಲ್ಲ, ಅದೊಂದು ಜನರ ಬದುಕನ್ನು ಬದಲಾಯಿಸುವ ದಿವ್ಯ ಚೇತನ ಎಂದು ಶಾಸಕರು ಬಣ್ಣಿಸಿದರು.
ಸ್ತ್ರೀಶಕ್ತಿ ಒಕ್ಕೂಟಗಳ ಪ್ರಗತಿ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವಲ್ಲಿ ಯೋಜನೆಯ ಪಾತ್ರ ಹಿರಿದಾದುದು. ಈ ಮಹತ್ವದ ಯೋಜನೆಗಳಲ್ಲಿ ಕೆರೆ ಪುನಶ್ಚೇತನ ಗೊಳಿಸುವ ಯೋಜನೆ ಸಹ ಒಂದಾಗಿದೆ ಅದಕ್ಕಾಗಿ ಕೆರೆಗಳನ್ನು ಕೇವಲ ನೀರು ಸಂಗ್ರಹಣಾ ಸ್ಥಳಗಳಾಗಿ ನೋಡದೆ, ಅವುಗಳನ್ನು ಜೀವಪರಿಸರ ವ್ಯವಸ್ಥೆಯ ಪ್ರಮುಖ ಅಂಗವಾಗಿ ಕಾಪಾಡಿಕೊಳ್ಳುವ ಅಗತ್ಯವಿದೆ. ಕೆರೆಗಳ ನೀರು ಕಲುಷಿತಗೊಳ್ಳದಂತೆ ತಡೆಯಲು ಸಾರ್ವಜನಿಕರು ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯ ಹಾಗೂ ಕೆರೆಗೆ ಎಸೆಯಬಾರದು. ಕೇವಲ ಸರ್ಕಾರದ ಅನುದಾನದಿಂದ ಮಾತ್ರ ಕೆರೆಗಳನ್ನು ರಕ್ಷಿಸಲು ಸಾಧ್ಯವಿಲ್ಲ ಸ್ಥಳೀಯ ಯುವಕರು, ಹಿರಿಯರು ಮತ್ತು ಸಂಘ ಸಂಸ್ಥೆಗಳು ಕೆರೆಗಳ ಸ್ವಚ್ಛತೆ ನಮ್ಮ ಹೊಣೆಗಾರಿಕೆಯಾಗಿ ಸ್ವೀಕರಿಸಬೇಕು.
ಕೆರೆಯ ಪಾಳಿ ಮತ್ತು ಸುತ್ತಮುತ್ತಲಿನ ಖಾಲಿ ಜಾಗಗಳಲ್ಲಿ ನೆರಳು ನೀಡುವ ಹಾಗೂ ಪರಿಸರ ಸ್ನೇಹಿಯಾದ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆಟ್ಟು ಬೆಳೆಸಬೇಕು. ಆ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಕೆರೆಗಳು ಜಲಚರಗಳು, ಮೀನುಗಳು ಮತ್ತು ವಲಸೆ ಬರುವ ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಜೀವ ವೈವಿಧ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಕೆರೆಯ ನೀರು ಸ್ವಚ್ಛವಾಗಿದ್ದರೆ ಮಾತ್ರ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ ಎಂದ ಅವರು ನಮ್ಮ ಸಂಸ್ಕೃತಿಯಲ್ಲಿ ಜಲಮೂಲಗಳನ್ನು ತಾಯಿಯಂತೆ ಪೂಜಿಸುವ ಪರಂಪರೆಯಿದೆ. ಪ್ರಕೃತಿಯನ್ನು ಕಾಪಾಡಿದರೆ ಮಾತ್ರ ಅದು ನಮಗೆ ಜೀವಜಲವನ್ನು ನೀಡುತ್ತದೆ. ಆದ್ದರಿಂದ ಜಲಮೂಲಗಳನ್ನು ಪವಿತ್ರವಾಗಿ ಹಾಗೂ ಕಲುಷಿತಗೊಳ್ಳದಂತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಧಾರವಾಡ ಯೋಜನೆ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲಾ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯೋಜನೆ ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದು, ಯೋಜನೆಯ ಆರಂಭದಿಂದಲೂ ಕೃಷಿಗೆ ಪ್ರಥಮ ಆದ್ಯತೆ ನೀಡಿ ರೈತರನ್ನು ಸಬಲರನ್ನಾಗಿ ಮಾಡುವುದರ ಜೊತೆಗೆ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಯೋಜನೆಯ ವಿವಿಧ ಜನಪರ ಆಯಾಮಗಳ ಕುರಿತು ಮಾತನಾಡಿ ಕೃಷಿ ಮತ್ತು ಮಹಿಳಾ ಸಬಲೀಕರಣದ ಜತೆಗೆ ಜಲಮೂಲಗಳ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಈ ಯೋಜನೆ ಅಪಾರ ಕೊಡುಗೆ ನೀಡುತ್ತಿದೆ. ನಮ್ಮೂರು ನಮ್ಮ ಕೆರೆ ಯಂತಹ ಯೋಜನೆಗಳಡಿ ಹಾಗೂ ಸ್ಥಳೀಯ ಸಹಭಾಗಿತ್ವದೊಂದಿಗೆ ಕೆರೆಗಳ ಹೂಳು ತೆಗೆಯುವುದು ಮತ್ತು ಜಲಮೂಲಗಳ ಪುನಶ್ಚೇತನ ಕಾರ್ಯಗಳನ್ನು ಕೈಗೊಂಡು ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ.ಸ್ಥಳೀಯವಾಗಿ ರುದ್ರಭೂಮಿಗಳಲ್ಲಿ ದಹನ ಮಂಟಪಗಳ ನಿರ್ಮಾಣದಂತಹ ಮೂಲಭೂತ ಹಾಗೂ ಸಮಾಜಪರ ಕಾರ್ಯಗಳಿಗೂ ಈ ಯೋಜನೆಯು ಕೈಜೋಡಿಸುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿದೆ ಎಂದರು.
ಕಿತ್ತೂರು ತಹಸೀಲ್ದಾರ್ ಕಲಗೌಡ ಪಾಟೀಲ ಅತಿಥಿ ಸ್ಥಾನ ವಹಿಸಿ ಮಾತನಾಡಿ ಕೆರೆಗಳ ಅಭಿವೃದ್ಧಿ ಎನ್ನುವುದು ಅದು ಸಮುದಾಯದ ಜೀವನಾಡಿಯ ಪುನರುಜ್ಜೀವನ ಎನ್ನಬಹುದು. ಕೆರೆ ಅಭಿವೃದ್ಧಿಯಾದಾಕ್ಷಣ ಕೆಲಸ ಮುಗಿಯಿತು ಎಂದಲ್ಲ, ಅಲ್ಲಿಂದ ನಿಜವಾದ ಜವಾಬ್ದಾರಿ ಆರಂಭವಾಗುತ್ತದೆ ಎಂದು ಮಾರ್ಮಿಕವಾಗಿ ಮಾತು ಆರಂಭಿಸಿ,ಕೆರೆಗಳನ್ನು ಕೇವಲ ನೋಡಲು ಸುಂದರವಾಗಿ ಕಾಣುವಂತೆ ಮಾಡುವುದು ನಮ್ಮ ಉದ್ದೇಶವಲ್ಲ. ಅಂತರ್ಜಲ ಮಟ್ಟವನ್ನು ವೃದ್ಧಿಸಿಕೊಳ್ಳುವುದು, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಸುತ್ತಮುತ್ತಲಿನ ಹಸಿರು ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಸ್ಥಳೀಯರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು.ಅಭಿವೃದ್ಧಿ ಪಡಿಸಿದ ಕೆರೆಗಳನ್ನು ಕಲುಷಿತಗೊಳಿಸದೆ, ಅವುಗಳ ಒತ್ತುವರಿಯನ್ನು ತಡೆದು, ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರ ಸಹಭಾಗಿತ್ವವಿದ್ದಾಗ ಮಾತ್ರ ಕೆರೆಗಳ ಅಭಿವೃದ್ಧಿಯಾಗಲು ಹಾಗೂ ಅವುಗಳ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ಜಿ.ಆರ್ ಸೋನೆರ ಕೆರೆ ಹಸ್ತಾಂತರ ಮಾಡಿ ಮಾತನಾಡಿದರು. ಜಿಲ್ಲಾ ಜನ ಜಾಗೃತಿ ಸದಸ್ಯ ಜಗದೀಶ್ ಹಾರುಗೊಪ್ಪ ಅತಿಥಿ ಸ್ಥಾನ ವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಂ.ಎಸ್ ಕಲ್ಮಠ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ ಅಧ್ಯಕ್ಷ ಸುರೇಶ್ ಮುತ್ನಾಳ ವಹಿಸಿದ್ದರು. ಈ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನಿಮಿತ್ತ ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಆರಂಭಗೊಂಡು ತುಂಬು ಕೆರೆಯವರೆಗೆ ಡೊಳ್ಳುಗಳ ನೀನಾದೊಂದಿಗೆ ಸುಮಂಗಲಿಯರು ಆರತಿ,ಕುಂಬ ಕೊಡದೊಂದಿಗೆ ಅದ್ದೂರಿಯ ಮೆರವಣಿಗೆಯೊಂದಿಗೆ ತುಂಬು ಕೆರೆಗೆ ಆಗಮಿಸಿ ಕೆರೆಗೆ ವಿಶೇಷ ಪೂಜೆ ಹಾಗೂ ಬಾಗಿನ ಅರ್ಪಣೆಯನ್ನು ನೆರವೇರಿಸಿದರು.
ಕೆರೆಗಳ ಸಂರಕ್ಷಣೆ ಮತ್ತು ಜಲಮೂಲಗಳ ಅಭಿವೃದ್ಧಿಯ ಮಹತ್ವ ಸಾರಿದ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಯೋಜನೆಯ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಜಿಲ್ಲಾ ನಿರ್ದೇಶಕ ಸತೀಶ್ ನಾಯಕ, ಪ ಪಂ ಉಪಾಧ್ಯಕ್ಷ ಲಕ್ಷ್ಮಿ ನಾಗನೂರ, ಮಲಪ್ರಭಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಫಕೀರಪ್ಪ ಸಕ್ರೆನ್ನವರ, ಕೆರೆ ಸಮಿತಿ ಗೌರವಾಧ್ಯಕ್ಷ ಎನ್.ಸಿ .ಗಣಾಚಾರಿ, ಉಪಾಧ್ಯಕ್ಷ ಜಾವಿಧ ಜಮಾದಾರ ಜಿಲ್ಲಾ ಜನಜಾಗೃತಿ ಸದಸ್ಯ ಅದೃಶ್ಯಾನಂದ ಗದ್ದೆಹಳ್ಳಿಶೆಟ್ಟಿ, ಪಪಂ ಮುಖ್ಯಾಧಿಕಾರಿ ರವಿ ಮಾಸ್ತಿಹೊಳಿಮಠ, ಧಾರವಾಡ ಕೆರೆ ಅಭಿಯಂತರ ನಿಂಗರಾಜ ಮಾಳವಾಡ, ಯೋಜನೆಯ ಯೋಜನಾಧಿಕಾರಿ ಬಿ.ಆರ್.ಯೋಗೇಶ, ಮೇಲ್ವಿಚಾರಕ ಜನಾರ್ಧನ, ಕಂದಾಯ ಇಲಾಖೆ ಅಧಿಕಾರಿ ಬಸವರಾಜ ಕೊಂಡಿಕೊಪ್ಪ,ಪಪಂ ಸದಸ್ಯರಾದ ದೇಮಪ್ಪ ಬಸರಗಿ, ಸಮೀರ ಪಟೇಲ, ಪ್ರಕಾಶ ಗಿರಜಿಮನಿ, ಸುಭಾನಿ ಅಗಿಸಿಬಾಗಿಲ, ನಾಗರಿಕರಾದ ಗೋಣಿಕಾಂತಿಮಠ, ರುದ್ರಪ್ಪ ಕೊಡ್ಲಿ, ಅಶೋಕ ಕಲಾಲ, ಬಾಳೇಶ ಪಾಗಾದ, ಯಲ್ಲಪ್ಪ ಜೋತಗನ್ನವರ, ಸೈಯದ್ ಶಾ ಪಿರಜಾದೆ , ಆದಮಸಾಬ್ ಹೊಂಗಲ, ರಾಜು ಮಾದಾರ, ಮಂಜುನಾಥ ಸಂಗೊಳ್ಳಿ, ಹನೀಫ್ ತನೇಖಾನ, ಮಲ್ಲೇಶ ಕೋಲಕಾರ, ಗಿರೀಶ ಕುಲಕರ್ಣಿ, ಈರಣ್ಣ ಕತ್ತಿ,, ರಾಜೇಂದ್ರ ಗಾಣಿಗೇರ, ಮಕ್ತುಮಸಾಬ ಪಟೇಲ ಸೇರಿದಂತೆ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.