ತಾಳಿಕೋಟೆ, ತಾಲೂಕು ಕೇಂದ್ರವಾಗಿರುವ ತಾಳಿಕೋಟೆ ಪಟ್ಟಣದಲ್ಲಿ ಈಗಾಗಲೇ ಮಂಜೂರಾಗಿರುವ ಉಪ ನೋಂದಣಿ (ಸಬ್ ರಿಜಿಸ್ಟ್ರಾರ್) ಕಾರ್ಯಾಲಯವನ್ನು ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ತಾಳಿಕೋಟೆ ಘಟಕದ ವತಿಯಿಂದ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ತಾಳಿಕೋಟೆ ಪಟ್ಟಣವು ಪ್ರಮುಖ ವ್ಯಾಪಾರ ಹಾಗೂ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದು, ತಾಲೂಕು ಕೇಂದ್ರವಾಗಿ ಸುಮಾರು ಹತ್ತು ವರ್ಷಗಳಾಗಿವೆ. ಆದರೆ ಪಟ್ಟಣದಲ್ಲಿ ಉಪ ನೋಂದಣಿ ಕಚೇರಿ ಇಲ್ಲದ ಕಾರಣ, ಆಸ್ತಿ ಖರೀದಿ-ಮಾರಾಟ, ಇಸಿ, ಹಕ್ಕುಬಿಡುವಿಕೆ ಸೇರಿದಂತೆ ವಿವಿಧ ನೋಂದಣಿ ಸಂಬಂಧಿತ ಕೆಲಸಗಳಿಗಾಗಿ ಸಾರ್ವಜನಿಕರು ಮುದ್ದೇಬಿಹಾಳಕ್ಕೆ ತೆರಳಬೇಕಾಗಿದೆ. ಇದರಿಂದ ರೈತರು, ಬಡವರು ಹಾಗೂ ಸಾರ್ವಜನಿಕರು ಅನಗತ್ಯವಾಗಿ ಸಮಯ ಮತ್ತು ಹಣ ವ್ಯಯಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಳಿಕೋಟೆ ತಾಲೂಕು ಕೇಂದ್ರವಾಗಿ ಘೋಷಣೆಯಾದ ನಂತರವೂ ಪ್ರಮುಖ ಸರ್ಕಾರಿ ಸೇವೆಗಳು ಸ್ಥಳೀಯವಾಗಿ ಲಭ್ಯವಾಗದಿರುವುದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಈಗಾಗಲೇ ಮಂಜೂರಾಗಿರುವ ಉಪ ನೋಂದಣಿ ಕಾರ್ಯಾಲಯವನ್ನು ಶೀಘ್ರವಾಗಿ ಕಾರ್ಯಾರಂಭಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಮಯದಲ್ಲಿ ಶಾಸಕ ಸಿ.ಎಸ್.ನಾಡಗೌಡ ಅವರು ಅಗತ್ಯ ಕ್ರಮ ವಹಿಸಿ ತಾಲೂಕಿಗೆ ಅವಶ್ಯವಿರುವ ಎಲ್ಲ ಸರ್ಕಾರಿ ಕಚೇರಿಗಳ ಪ್ರಾರಂಬಿಸಲಾಗುವದು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಕೆಲವು ಕಚೇರಿಗೆ ಪ್ರಸ್ಥಾವನೆ ಹಂತದಲ್ಲಿವೆ ಸೀಘ್ರದಲ್ಲಿಯೇ ಸರ್ಕಾರದಿಂದ ಮಂಜೂರಾತಿ ಪಡೆದು ಪ್ರಾರಂಬಿಸಲಾಗುವದೆಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸು ಕಟ್ಟಿಮನಿ, ತಾಲೂಕು ಅಧ್ಯಕ್ಷ ಗೋಪಾಲ್ ಕಟ್ಟಿಮನಿ, ಶಂಕರ್ ಮಾದರ, ಜುಮಣ್ಣ ನಾಲತವಾಡ, ಬಡೇಸಾಬ್ ಚೌಧರಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.