ಬಾಗಲಕೋಟೆ, ಜೂನ್ ೧೭ ( : ಜಿಲ್ಲೆಯಲ್ಲಿ ಜೂನ್ ೨೧ ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ೨೦೨೬ರ ಮರು ಪರೀಕ್ಷೆಯನ್ನು ಸುಗಮ, ಪಾರದರ್ಶಕ ಹಾಗೂ ದೋಷರಹಿತವಾಗಿ ನಡೆಸಲು ಎಲ್ಲ ರೀತಿ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ನೀಟ್ ಪರೀಕ್ಷೆ-೨೦೨೬ರ ಕುರಿತು ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆ ಜನರದಲ್ಲಿ ೧೧ ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಒಟ್ಟು ೩೯೬೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಸಿದ್ದತೆ ಮತ್ತು ಸುಗಮ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ಕೇಂದ್ರಗಳ ಸಿಬ್ಬಂದಿಗಳ ಚಲನವಲನ ಗಮನಿಸಲು ಓರ್ವ ಸಿಬ್ಬಂದಿಗಳನ್ನು ನೇಮಿಸಲು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ಸೌಚಾಲಯ, ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಪರೀಕ್ಷಾರ್ಥಿಗಳು ಯಾವುದೇ ರೀತಿಯ ತೊಂದರೆ ತೊಂದತೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು ಪ್ರಶ್ನೆ ಪತ್ರಿಕೆಗಳ ಸುರಕ್ಷತೆ ಸಾಗಣೆ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು, ಪೊಲೀಸ್ ಬಂದೋಬಸ್ತ ಹಾಗೂ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿಗಲೊಳಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೀಟ್ ಮರು ಪರೀಕ್ಷೆಯು ಜೂನ್ ೨೧ ರಂದು ಮಧ್ಯಾಹ್ನ ೨ ರಿಂದ ಸಂಜೆ ೫.೧೫ರ ವರೆಗೆ ನಡೆಯಲಿದ್ದು, ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳ ಪ್ರಿಸ್ಕಿಂಗ್ ಕಾರ್ಯ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ ವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ೧೧ ಗಂಟೆಗೆ ಹಾಜರಾಗಬೇಕು. ಪ್ರಿಸ್ಕಿಂಗ್ ಸಮಂiiದಲ್ಲಿ ಎನ್.ಟಿ.ಎ ನಿಯೋಜಿಸಿರುವ ಏಜೆನ್ಸಿ ಜೊತೆಗೆ ಓರ್ವ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಅವರ ಮೂಲಕ ಪ್ರಿಸ್ಕಿಂಗ್ ಕಾರ್ಯ ನಡೆಸಬೇಕು. ಜೂನ್ ತಿಂಗಳಲ್ಲಿ ಮಳೆಗಾಲ ಇರುವದರಿಂದ ಪರೀಕ್ಷಾ ಕೇಂದ್ರದ ಕಟ್ಟಡದಲ್ಲಿ ನೀರು ಸೋರಿಕೆಯಾಗದಂತೆ ಮುಂಚಿತವಾಗಿ ತಪಾಸಣೆ ಮಾಡಲು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ ನೀಟ್ ಮರು ಪರೀಕ್ಷೆಗೆ ೧೧ ಪರೀಕ್ಷಾ ಕೇಂದ್ರಗಳಿದ್ದು, ಪ್ರತಿಯೊಂದು ಕೇಂದ್ರಗಳಿಗೆ ೧೦ ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಗೌಪ್ಯ ಸಾಮಗ್ರಿಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಬ್ಯಾಂಕಿನ ಸ್ಟ್ರಾಂಗ್ ರೂಮ್‌ಗೆ ಓರ್ವ ಎ.ಎಸ್.ಐ ಮತ್ತು ೪ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜನ ಪ್ರಾಚಾರ್ಯ ಪ್ರಭಾಕರ ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ.ಮನ್ನಿಕೇರಿ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಪರೀಕ್ಷಾ ವೀಕ್ಷಕರು ಉಪಸ್ಥಿತರಿದ್ದರು.
