ತಾಳಿಕೋಟೆ, ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ಧಯುತವಾಗಿ ಆಚರಿಸುವ ಉದ್ದೇಶದಿಂದ ಪೋಲಿಸ್ ಇಲಾಖೆಯ ವತಿಯಿಂದ ಮಂಗಳವಾರರಂದು ಸ್ಥಳೀಯ ಸಾರ್ವಜನಿಕರ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಶಾಂತಿ ಸಭೆ ನಡೆಸಲಾಯಿತು.
ಶ್ರೀ ವಿಠ್ಠಲಮಂದಿರದಲ್ಲಿ ನಡೆದ ಈ ಶಾಂತಿ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಬ.ಬಾಗೇವಾಡಿ ಡಿಎಸ್‌ಪಿ ನಂದಾರೆಡ್ಡಿ ಅವರು ಗಣೇಶೋತ್ಸವ ಮಂಡಳಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆವರೆಗೆ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರವಹಿಸಬೇಕು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಉತ್ಸವವನ್ನು ಆಚರಿಸಬೇಕೆಂದು ಅಧಿಕಾರಿಗಳು ತಿಳಿಸಿದರು.
ಗಣೇಶೋತ್ಸವ ಮಂಡಳಿಯವರು ಪೋಲಿಸ್ ಇಲಾಖೆಯಿಂದ ಅಗತ್ಯ ಅನುಮತಿ ಪಡೆದು ಕಾರ್ಯಕ್ರಮಗಳು ನಡೆಸಬೇಕು ಮೆರವಣಿಗೆ ಸಂದರ್ಭದಲ್ಲಿ ನಿಗದಿತ ಮಾರ್ಗವನ್ನು ಬಳಸಬೇಕು ಹಾಗೂ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಕೊಳ್ಳಬೇಕೆಂದರು.
ಧ್ವನಿವರ್ಧಕಗಳನ್ನು ಸರ್ಕಾರದ ನಿಯಮಾನುಸಾರ ನಿಗದಿತ ಸಮಯದಲ್ಲಿ ಮಾತ್ರ ಬಳಸಬೇಕೆಂದು ಸೂಚಿಸಲಾಯಿತು.
ಮೆರವಣಿಗೆಯಲ್ಲಿ ಅಶ್ಲೀಲ ಪ್ರಚೋದನಕಾರಿ ಅಥವಾ ಯಾವದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತ ಹಾಡು ಘೋಷಣೆ ಹಾಗೂ ಪ್ರದರ್ಶನಗಳಿಗೆ ಅವಕಾಶ ನೀಡಬಾರದು ಯುವಕ ಹಾಗೂ ಮಂಡಳಿಯ ಸದಸ್ಯರು ಶಿಸ್ತು ಕಾಪಾಡಿಕೊಂಡು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಡಿಎಸ್‌ಪಿ ಅವರು ಸಲಹೆ ನೀಡಿದರು.
ಇನ್ನೋರ್ವ ಮುದ್ದೇಬಿಹಾಳ ಸಿಪಿಐ ಮೊಹ್ಮದ ಫಸಿಯುದ್ದೀನ್ ಅವರು ಮಾತನಾಡಿ ಗಣೇಶ ಮೂರ್ತಿ ವಿಸರ್ಜನೆ ಸಂಧರ್ಭದಲ್ಲಿ ಹಾಗೂ ಪ್ರತಿಷ್ಠಾಪನಾ ಸ್ಥಳದಲ್ಲಿ ವಿಸರ್ಜನೆ ನಡೆಯುವವರೆಗೂ ಸ್ವಯಂ ಸೇವಕರನ್ನು ನೇಮಕ ಮಾಡಿ ಅವರಿಗೆ ಗುರುತಿನ ಪತ್ರ ನೀಡಬೇಕು ಹಾಗೂ ಆಯಾ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ವ್ಯವಸ್ಥೆಯಾಗಬೇಕೆಂದರು. ಮೆರವಣಿಗೆಯಲ್ಲಿ ಯಾವದೇ ರೀತಿ ಗಲಾಟೆ, ಕುಡಿದು ವಾಹನ ಚಲಾಯಿಸುವದು, ಪಟಾಕ್ಷಿ ಸಿಡಿಸುವದು ಅಥವಾ ಅಪಾಯಕಾರಿ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಸಿಪಿಐ ಅವರು ಎಚ್ಚರಿಕೆ ನೀಡಿದರು. ಗಣೇಶ ಉತ್ಸವವು ಎಲ್ಲರ ಸಹಭಾಗಿತ್ವದಲ್ಲಿ ಶಾಂತಿ ಸೌಹಾರ್ಧತೆ ಭಕ್ತಿಯಿಂದ ನಡೆಯಬೇಕು ಯಾವದೇ ಸಮಸ್ಯೆ ಎದುರಾದಲ್ಲಿ ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಯವರು ತಕ್ಷಣ ಪೋಲಿಸರ ಗಮನಕ್ಕೆ ತರಬೇಕು ಪೊಲೀಸ್ ಇಲಾಖೆ ನೀಡಿರುವ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಗಣೇಶೋತ್ಸವವನ್ನು ಆಚರಿಸಬೇಕೆಂದು ಅಧಿಕಾರಿಗಳು ತಿಳಿಸಿದರು.
ಈ ಸಮಯದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿ ಹಾಗೂ ತಾಲೂಕಾ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ, ಪುರಸಭೆ ಕಂದಾಯ ಅಧಿಕಾರಿ ಅಂಭ್ರಣ್ಣವರ ಅವರು ಕೆಲವು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಮಯದಲ್ಲಿ ಸಾರ್ವಜನಿಕರ ಗಣೇಶೋತ್ಸವ ಮಂಡಳಿಯ ಕಾರ್ಯದರ್ಶಿಯಾದ ಕಾಶೀನಾಥ ಮುರಾಳ ಹಾಗೂ ಸುರೇಶ ಹಜೇರಿ, ಜಯಸಿಂಗ್ ಮೂಲಿಮನಿ ಮೊದಲಾದವರು ಅಧಿಕಾರಿಗಳ ಮಾತಿಗೆ ಒಪ್ಪಿಕೊಂಡು ವ್ಯವಸ್ಥಿತವಾಗಿ ಗಣೇಶೋತ್ಸವವನ್ನು ಆಚರಿಸುವ ಕುರಿತು ಹೇಳಿದರು.
ಇದೇ ಸಮಯದಲ್ಲಿ ಕೆಲವು ಅಡೆತಡೆಗಳ ಕುರಿತು ಸಹ ಕೆಲವು ಮಂಡಳಿಯ ಸದಸ್ಯರು ಅಧಿಕಾರಿಗಳ ನದುರಿಗೆ ತಂದಾಗ ಅವುಗಳನ್ನು ಸರಿಪಡಿಸುವದಾಗಿ ಅಧಿಕಾರಿಗಳು ತಿಳಿಸಿದರು.
ಪಿಎಸ್‌ಐ ಜ್ಯೋತಿ ಖೋತ್ ಅವರು ಕಾರ್ಯಕ್ರಮ ನಿರ್ವಹಿಸಿದರು.