ಬಳ್ಳಾರಿ:01: ಜನಸೇನಾ ಪಕ್ಷದ ವತಿಯಿಂದ ಪಕ್ಷದ ಮುಖ್ಯಸ್ಥ ಕೊಣಿದಲ ಪವನ್ ಕಲ್ಯಾಣ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಜನಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ‘ಒಂದು ದಿನದ ಸಂಭ್ರಮವಲ್ಲ, 365 ದಿನಗಳ ಜನಸೇವೆಯೇ ನಮ್ಮ ಸಂಕಲ್ಪ’ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಜನಸೇನಾ ಪಕ್ಷದ ಬಳ್ಳಾರಿ ಸಾಧಕ ರವಿ ಭಾರತೀಯ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸೇನಾ ಪಕ್ಷವು ಜಾತಿಗಳನ್ನು ಒಗ್ಗೂಡಿಸುವ ಚಿಂತನಾ ವಿಧಾನ, ಧರ್ಮಗಳ ಪ್ರಸ್ತಾಪವಿಲ್ಲದ ರಾಜಕೀಯ, ಎಲ್ಲ ಭಾಷೆಗಳ ಗೌರವ, ಸಂಸ್ಕೃತಿಗಳ ಸಂರಕ್ಷಣೆ, ಪ್ರಾದೇಶಿಕತೆಯನ್ನು ಮರೆಯದ ರಾಷ್ಟ್ರೀಯತೆ, ಭ್ರಷ್ಟಾಚಾರದ ವಿರುದ್ಧ ರಾಜಿಯಿಲ್ಲದ ಹೋರಾಟ ಹಾಗೂ ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಎಂಬ ಏಳು ಮೂಲ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು.
ಪವನ್ ಕಲ್ಯಾಣ ಅವರ ಹುಟ್ಟುಹಬ್ಬದ ಅಂಗವಾಗಿ ಜನಸೇವಾ ಕೇಂದ್ರ ಉದ್ಘಾಟನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉಚಿತ ಕಣ್ಣಿನ ತಪಾಸಣೆ ಮತ್ತು ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆ, ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ನಡೆಸಲಾಗುವುದು. ಹೃದಯ, ಕ್ಯಾನ್ಸರ್, ನರ, ಮೂತ್ರಪಿಂಡ, ಮೂಳೆ ಮತ್ತು ಕೀಲು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಸೇವೆಗಳನ್ನು ಜನರಿಗೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮಗಳ ಉದ್ಘಾಟನೆಯ ಅಂಗವಾಗಿ ಸೆಪ್ಟೆಂಬರ್ 2ರಂದು ಬಳ್ಳಾರಿಯ ದುರ್ಗಮ್ಮ ದೇವಸ್ಥಾನ ಸಮೀಪದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜನಸೇವಾ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ರವಿ ಭಾರತೀಯ ಮನವಿ ಮಾಡಿದರು.
ಬಳ್ಳಾರಿಯ ಹೊಸ ಕೆಎಸ್‌ಆರ್‌ಡಿಪಿ ಬಸ್ ನಿಲ್ದಾಣದ ಬಳಿಯಿರುವ ಸರ್.ಎಂ. ವಿಶ್ವೇಶ್ವರಯ್ಯ ಲಾರಿ ಟರ್ಮಿನಲ್ ಆವರಣದಲ್ಲಿ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಜನಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿಯಲ್ಲಿ ಪಕ್ಷದ ಉದ್ಘಾಟನೆ, ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಜಿಲ್ಲಾ ಕಚೇರಿ ಉದ್ಘಾಟನೆ ನಡೆಯಲಿದೆ ಎಂದು ಅವರು ತಿಳಿಸಿದರು.
ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಎಂಬ ಆಶಯದೊಂದಿಗೆ ಪಕ್ಷವು ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಿದೆ. ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತರು ಬಳ್ಳಾರಿ ರವಿ ಭಾರತೀಯ ಅವರನ್ನು 9606058266 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್, ತಿಪ್ಪೇಸ್ವಾಮಿ, ರಾಘವೇಂದ್ರ, ಪದ್ಮಾವತಿ, ಶಾಂತಿ ಹಾಗೂ ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.