ರಾಯಬಾಗ: ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶ ಮತ್ತು ಆದ್ಯತೆಯಾಗಿದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಹೇಳಿದರು.
ಬುಧವಾರ ತಾಲೂಕಿನ ಮೊರಬ ಗ್ರಾಮದಲ್ಲಿ ಕುಡಚಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಎಸ್.ಸಿ.ಪಿ ಯೋಜನೆಯಡಿ ಮಂಜೂರಾದ 2 ಕೋಟಿ ರೂ.ವೆಚ್ಚದಲ್ಲಿ 15 ರಸ್ತೆ ಕಾಮಗಾರಿಗಳ ಹಾಗೂ ಟಿ.ಎಸ್.ಪಿ.ಯೋಜನೆಯಡಿ ಮಂಜೂರಾದ 50 ಲಕ್ಷ ರೂ. ವೆಚ್ಚದಲ್ಲಿ 5 ರಸ್ತೆ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ತಂದೆ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿಯವರು ಈ ಭಾಗದ ಅಭಿವೃದ್ಧಿಗಾಗಿ ತಮ್ಮ ಇಲಾಖೆಯಿಂದ ಈಗಾಗಲೇ ಸಾಕಷ್ಟು ಅನುದಾನ ಮಂಜೂರು ಮಾಡಿಸಿದ್ದಾರೆ, ರಾಯಬಾಗ-ಮೊರಬ ರಸ್ತೆ ಸುಧಾರಣೆಗೆ ಕೂಡ ಅನುದಾನ ಮಂಜೂರು ಮಾಡಿಸಿದ್ದಾರೆ.
ಈ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸಲು ಕೆನಾಲಗಳಿಗೆ ನೀರು ಹರಿಸಿ ಜನ ಜಾನುವಾರುಗಳಿಗೆ ಅನುಕೂಲ ಮಾಡಿದ್ದಾರೆ. ಜಿಲ್ಲೆಯ ಜನರ ಆಶೀರ್ವಾದಿಂದ ಹೊಸ ಸಚಿವ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ ದೊರಕಿದೆ ಎಂದು ಹೇಳಿದರು. ಹಿರಿಯ ಮುಖಂಡರಾದ ಡಿ.ಎಸ್.ನಾಯಿಕ, ಸಂಜೀವಕುಮಾರ ಬಾನೆಸರಕಾರ, ವಕೀಲರಾದ ರಾಜು ಶಿರಗಾಂವೆ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಕಲ್ಪನಾ ಕಾಂಬಳೆ, ಪಿಡಿಒ ರೂಪಾ ಸವದಿ,ಸಜ್ಜನ ರೋಹಿಲೆ, ಜಯದೇವ ಸನದಿ, ಸದಾಶಿವ ಗಡ್ಡೆ, ಶಂಬಾಜಿ ಶಿಂದೆ, ಉಮೇಶ್ ಅಸೋದೆ, ಹನುಮಂತ ಅಸೋದೆ ಸೇರಿ ಅನೇಕರು ಇದ್ದರು.
