ಅಥಣಿ : ಕಾಯಕದಲ್ಲಿ ನಿಷ್ಠೆ, ಬದುಕಿನಲ್ಲಿ ಸರಳತೆ, ಸಮಾಜದಲ್ಲಿ ಸಮಾನತೆ” ಎಂಬ ಶರಣ ನೂಲಿ ಚಂದಯ್ಯನವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಸಿಗಲಿದೆ. ಶರಣ ನೂಲಿ ಚಂದಯ್ಯನವರು ಕಾಯಕವೇ ಕೈಲಾಸ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾಯಕಕ್ಕೆ ಮಹತ್ವ ನೀಡಿದ ಶರಣರಲ್ಲಿ ಪ್ರಮುಖರಾಗಿದ್ದಾರೆ ಎಂದು ಶರಣ ನೂಲಿ ಚಂದಯ್ಯ ಕೊರಮ ಸಮಾಜ ಸೇವಾ ಸಂಘದ ಅಧ್ಯಕ್ಷ ಶಶಿಕುಮಾರ ಶಿವಾಜಿ ಭಜಂತ್ರಿ ಹೇಳಿದರು.
ಅವರು ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಕಾಯಕಯೋಗಿ ಶ್ರೀ ಶಿವಶರಣ ನೂಲಿ ಚಂದಯ್ಯ ಕೊರಮ ಸಮಾಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶರಣ ನೂಲಿ ಚಂದಯ್ಯನವರ ಜಯಂತಿ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿದರು.12ನೇ ಶತಮಾನದ ಶರಣ ಪರಂಪರೆಯಲ್ಲಿ ನೂಲಿ ಚಂದಯ್ಯನವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಪ್ರಾಮಾಣಿಕ ದುಡಿಮೆಯ ಮಹತ್ವವನ್ನು ಸಮಾಜಕ್ಕೆ ಸಾರಿದ ಅವರು, ಶ್ರಮಜೀವಿಗಳ ಗೌರವವನ್ನು ಎತ್ತಿಹಿಡಿದ ಮಹಾನ್ ಚಿಂತಕರಾಗಿದ್ದರು. ನೂಲಿ ಚಂದಯ್ಯನವರ ಜೀವನದಲ್ಲಿ ಕಾಯಕನಿಷ್ಠೆ, ಸರಳತೆ, ಪ್ರಾಮಾಣಿಕತೆ ಮತ್ತು ಯಾವುದೇ ಕೆಲಸವನ್ನು ಕೀಳಾಗಿ ಕಾಣದೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವುದೇ ನಿಜವಾದ ಧರ್ಮ ಎಂಬ ಸಂದೇಶವನ್ನು ಸಾರಿದ್ದಾರೆ ಇಂತಹ ಮಹಾನ್ ಶರಣರ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
"ಕಾಯಕಕ್ಕೆ ನೀಡಿದ ಮಹತ್ವ" : ಶರಣರ ಪರಂಪರೆಯಲ್ಲಿ ಕಾಯಕಕ್ಕೆ ವಿಶೇಷ ಸ್ಥಾನವಿದೆ. ಕಾಯಕದಲ್ಲಿ ಪ್ರಾಮಾಣಿಕತೆ, ಬದುಕಿನಲ್ಲಿ ಸರಳತೆ ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ಅವರ ಜೀವನ ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ. ಶರಣ ನೂಲಿ ಚಂದಯ್ಯನವರ ಜಯಂತಿ ಆಚರಣೆ ಕೇವಲ ಒಂದು ಆಚರಣೆಯಾಗದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು ಅವರ ಆದರ್ಶಗಳು ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಶರಣ ನೂಲಿ ಚಂದಯ್ಯ ಕೊರಮ ಸಮಾಜ ಸೇವಾ ಸಂಘದ ಅಧ್ಯಕ್ಷ ಶಶಿಕುಮಾರ ಶಿವಾಜಿ ಭಜಂತ್ರಿ ನೇತೃತ್ವದಲ್ಲಿ ಕಾಯಕಯೋಗಿ ಶ್ರೀ ಶರಣ ನೂಲಿ ಚಂದಯ್ಯನವರ ಭಾವಚಿತ್ರಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸಲಾಯಿತು. ವೃತ್ತಕ್ಕೆ ನಾಮಕರಣ ಮಾಡಿ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು
ಕಾರ್ಯಕ್ರಮದಲ್ಲಿ ಹಿರಿಯರಾದ ಲಕ್ಷ್ಮಣ ಭಜಂತ್ರಿ. ಸಂಘದ ಸದಸ್ಯರಾದ ಪ್ರಕಾಶ ಭಜಂತ್ರಿ, ಗೋಪಾಲ ಭಜಂತ್ರಿ, ಶಿವಶಂಕರ ಭಜಂತ್ರಿ, ರಮೇಶ ಭಜಂತ್ರಿ, ಸಂಜು ಭಜಂತ್ರಿ, ಸತ್ಯರಾಜ್ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಉಮೇಶ್ ಭಜಂತ್ರಿ, ರಾಜು ಭಜಂತ್ರಿ, ರಾಮಣ್ಣ ಭಜಂತ್ರಿ, ನಾಗೇಶ್ ಭಜಂತ್ರಿ ,ಮಹೇಶ್ ಭಜಂತ್ರಿ, ಪರಶುರಾಮ ಭಜಂತ್ರಿ, ಮಹಾಂತೇಶ ಭಜಂತ್ರಿ ಸೇರಿದಂತೆ ಹಲವರು ಕೊರಮ ಸಮಾಜದ ಮುಖಂಡರು, ಕಮಿಟಿ ಪದಾಧಿಕಾರಿಗಳು, ಹಾಗೂ ಸಮಾಜದ ಬಾಂಧವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.