ಹಸಿರು ಕ್ರಾಂತಿ ವರದಿ ಬೆಳಗಾವಿ
ಇಲ್ಲಿನ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆ.12 ರಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಲ್‌ಐಎಸ್ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಬೆಳಗಾವಿ ಜಿಲ್ಲಾ ಘಟಕ, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಕೆಆರ್‌ಸಿಯು) ಹಾಗೂ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಓದುವ ಹವ್ಯಾಸ ಮತ್ತು ನಿರಂತರ ಕಲಿಕೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ನಗರ ಕೇಂದ್ರ ಗ್ರಂಥಾಲಯದಿಂದ ಓದು ಕರ್ನಾಟಕ ಜಾಥಾಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಾಲನೆ ನೀಡಲಿದ್ದಾರೆ. ಇಲ್ಲಿಂದ ಆರಂಭಗೊಂಡ ಜಾಥಾ ರಾಜಾ ಲಖಮಗೌಡ ಮಹಾವಿದ್ಯಾಲಯದವರೆಗೆ ಜರುಗಲಿದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೆಆರ್‌ಸಿಯು ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಆಗಮಿಸುವರು. ರಾಷ್ಟ್ರೀಯ ಗ್ರಂಥಾಲಯದ ನಿವೃತ್ತ ನಿರ್ದೇಶಕ ಪಿ.ವೈ.ರಾಜೇಂದ್ರಕುಮಾರ ಆಶಯಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಕಲಬುರಗಿ ವಿವಿಯ ಡಾ.ಸುರೇಶ ಜಂಗೆ, ಕುಮಾಟಾದ ಡಾ.ಶಿವಾನಂದ ಬುಳ್ಳಾ, ಬೆಳಗಾವಿ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ, ಬೆಂಗಳೂರಿನ ಗೊಥೆ ಸಂಸ್ಥೆಯ ಗ್ರಂಥಪಾಲಕ ಶೇಷಗಿರಿ ಕುಲಕರ್ಣಿ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ಗ್ರಂಥಾಲಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಡಾ.ಎಚ್.ಪಿ.ಶೇಖರ, ಕಿರಣ ಸವಣೂರು, ಪ್ರಾಂಶುಪಾಲರಾದ ಜ್ಯೋತಿ ಕವಳೇಕರ, ಭರತ ಅಲಸಂದಿ ಇತರರು ಇದ್ದರು.
ಗ್ರಂಥಪಾಲಕರ ನೇಮಕಕ್ಕೆ ಆಗ್ರಹ
ರಾಜ್ಯದ ಸಾರ್ವಜನಿಕ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಗ್ರಂಥಾಲಯಗಳಿಗೆ 2009 ರಿಂದ ಗ್ರಂಥಪಾಲಕರ ನೇಮಕವಾಗಿಲ್ಲ. ಇದರಿಂದ ಬಹುತೇಕ ಕಡೆಗಳಲ್ಲಿ ಅತಿಥಿ ಗ್ರಂಥಪಾಲಕರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೂ ಸಂಘದ ವತಿಯಿಂದ ಮನವಿ ಮಾಡಿ ಆಗ್ರಹಿಸಲಾಗಿದೆ. ಜತೆಗೆ ಗ್ರಂಥಾಲಯಗಳ ಸುಧಾರಣೆ ಆದ್ಯತೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಸಂಘ ಕಾರ್ಯ ನಿರ್ವಹಿಸಲಿದೆ.
-ಡಾ.ಪಿ.ವಿ.ಕೊಣ್ಣೂರ, ಗ್ರಂಥಾಲಯ ಸಂಘದ ರಾಜ್ಯಾಧ್ಯಕ್ಷರು.