LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ : ಸರಕಾರಿ ನೌಕರರಿಗೆ ಸಿಎಂ ಡಿ.ಕೆ.ಶಿವಕುಮಾರ ಕರೆ

ಹೋಬಳಿಯಿಂದ ಜಿಲ್ಲಾಮಟ್ಟದವರೆಗಿನ 5.5 ಲಕ್ಷ ಸಿಬ್ಬಂದಿಯನ್ನು ಉದ್ದೇಶಿಸಿ ನೇರ ಮಾತುಕತೆ; ಪ್ರಜಾ ಸೇವೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೊಸ ದಿಕ್ಸೂಚಿ.

ವಿಜಯನಗರ (ಹೊಸಪೇಟೆ) ಆ.11: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದ ಹೋಬಳಿಯಿಂದ ಜಿಲ್ಲಾಮಟ್ಟದ ಎಲ್ಲಾ ಹಂತದ ರಾಜ್ಯ ಸರಕಾರಿ ನೌಕರರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೇರ ಸಂವಾದ ಮಾಡಿ ನೂತನ ರಾಜ್ಯ ಸರ್ಕಾರದ ಆಶಯಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಬಿಚ್ಚಿಟ್ಟರು.

ಜಿಲ್ಲಾಡಳಿತ ವತಿಯಿಂದ ಇಂದು (ಆ.11) ಬೆಳಗ್ಗೆ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ನೌಕರರೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ರಾಜ್ಯ 750 ಸ್ಥಳಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸುಮಾರು 5.50 ಲಕ್ಷ ರಾಜ್ಯ ಸರ್ಕಾರಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಿ ನೌಕರರು ಸರಕಾರ ಮತ್ತು ಸಾರ್ವಜನಿಕರ ಮದ್ಯದ ಸೇತುವೆಯಾಗಿದ್ದಾರೆ. ಸರ್ಕಾರದ ಎಲ್ಲ ಜನ ಕಲ್ಯಾಣ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವ ಮತ್ತು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ಶಕ್ತಿಯಾಗಿದ್ದಾರೆ ಎಂದರು.

ಜನರೊಂದಿಗಿನ ರಾಜ್ಯ ಸರ್ಕಾರಿ ನೌಕರರು ತೋರುವ ಸ್ಪಂದನೆ, ನಡುವಳಿಕೆಗಳು ಸರ್ಕಾರದ ಸದಾಭಿಪ್ರಾಯದ ಸಂಕೇತವಾಗಿವೆ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂದರು.

ನೂತನವಾಗಿ ರಚಿತವಾಗಿರುವ ಪ್ರಜಾ ಸೇವೆ ಇಲಾಖೆ ಮೂಲಕ ಸರಕಾರ ಇನ್ನಷ್ಟು ಕ್ರಿಯಾಶೀಲವಾಗಿ, ಜನಮುಖಿಯಾಗಿ ಕೆಲಸ ಮಾಡಲು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಪ್ರಜಾ ಸೇವೆ ಇಲಾಖೆಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರತಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳು ತಮ್ಮ ಉಸ್ತುವಾರಿ ಜಿಲ್ಲೆಯ ಎರಡು ತಾಲೂಕುಗಳಲ್ಲಿ ಪ್ರಜಾಸೇವೆ ಇಲಾಖೆ ಕಾರ್ಯಕ್ರಮ ಜರಗಿಸಿ, ಪ್ರಜೆಗಳ ಸಮಸ್ಯೆಗಳಿಗೆ ಕಿವಿಯಾಗಿ, ಪರಿಹಾರ ಸೂಚಿಸಬೇಕು ಎಂದರು.

ಕ್ಷೇತ್ರ ಮಟ್ಟದ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಸಿಗಬೇಕು. ಸಚಿವರು, ಶಾಸಕರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಲು ಸೂಕ್ತ ಮಾರ್ಗದರ್ಶನದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿದ್ದು, ಎಲ್ಲರೂ ಪಾಲನೆ ಮಾಡಬೇಕೆಂದು ಮುಖ್ಯ ಮಂತ್ರಿಗಳು ಸೂಚಿಸಿದರು.
ಆಡಳಿತದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಸಹಿಸುವುದಿಲ್ಲ. ಪ್ರತಿಯೊಬ್ಬರು ಪಾರದರ್ಶಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಕಚೇರಿ ವೇಳೆಯಲ್ಲಿ ಲಭ್ಯವಿರಬೇಕು. ಗ್ರಾಮ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೆ ಎಲ್ಲ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ನೌಕರರು ಹಾಗೂ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಟೀಮ್ ಕರ್ನಾಟಕ ಆಗಿ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರಾಜ್ಯ ಸರ್ಕಾರಿ ನೌಕರರಿಗೆ ಕರೆ ನೀಡಿದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮತ್ತು ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಡಿ.ಕೆ.ಶಿವಕುಮಾರ ಅವರು ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಶೇ.60 ರಷ್ಟು ಮಳೆ ಕೊರತೆಯಾಗಿದೆ. ಮತ್ತು ಶೇಕಡಾ 65 ರಷ್ಟು ಬಿತ್ತನೆಯಾದ ಕೃಷಿ ಭೂಮಿಯಲ್ಲಿ ಶೇಕಡಾ 80 ರಷ್ಟು ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಗ್ರಾಮೀಣ ಜನರು ವಲಸೆ ಹೋಗುವುದನ್ನು ತಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ಕೃಷಿ ಮತ್ತು ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ಸರ್ಕಾರದ ಸೌಲಭ್ಯ ಮತ್ತು ಸವಲತ್ತುಗಳ ಕುರಿತು ತಿಳುವಳಿಗೆ ಕಾರ್ಯಕ್ರಮಗಳ ಮೂಲಕ ಮನವರಿಕೆ ಮಾಡಲಾಗುತ್ತಿದ್ದು, ವಿಬಿ ರಾಮ್ ಜಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ. ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಅವರು ಮಾಹಿತಿ ನೀಡಿ ಮಾತನಾಡಿ, ಮಳೆ ಅಭಾವದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿರ್ವಹಿಸಲು ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿಬಿ ರಾಮ್ ಜಿ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಬಯಸುವ ಸಾರ್ವಜನಿಕರಿಗೆ ಕೂಲಿ ಕೆಲಸ ನೀಡಲಾಗುತ್ತಿದೆ. ಕೂಲಿ ನಿರ್ವಹಿಸಿರುವ ಕಾರ್ಮಿಕರಿಗೆ ಭತ್ಯೆ ನೀಡಲು ಕ್ರಮ ವಹಿಸಲಾಗಿದೆ. ಗ್ರಾಮೀಣ ಜನರು ಗುಳೆ ಹೋಗದಂತೆ ಮತ್ತು ಉದ್ಯೋಗ ಅರಸಿ ವಲಸೆ ಹೋಗದಂತೆ ಗ್ರಾಮ ಪಂಚಾಯತಿಗಳ ಮೂಲಕ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಕ್ಕಳ ಶೈಕ್ಷಣಿಕ ಕಾರ್ಯಗಳಿಗೆ ತೊಂದರೆಯಾಗದAತೆ ಹಾಸ್ಟೆಲ್ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

 ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಹೊಸಪೇಟೆ ವಿಧಾನಸಭಾ ಮತ ಕ್ಷೇತ್ರದಲ್ಲಿ ಆಗುತ್ತಿರುವ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಕಾರ್ಯದ ಪ್ರಗತಿಯ ಬಗ್ಗೆ ಹೊಸಪೇಟೆ ತಹಶೀಲ್ದಾರ್‌ರಿಂದ ಮಾಹಿತಿ ಕೇಳಿದರು.

ಹೊಸಪೇಟೆ ತಹಶೀಲ್ದಾರ್ ಅವರು ಮಾತನಾಡಿ, ಹೊಸಪೇಟೆ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,52,288 ಮತದಾರರಿದ್ದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರ ಗೈರು, ಸ್ಥಳಾಂತರ ಹಾಗೂ ಮೃತರು ಸೇರಿದಂತೆ ಎಲ್ಲ ಅಂಶಗಳನ್ನು ಭಾರತ ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳ ಅನ್ವಯ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಎಚ್ಚರ ವಹಿಸಲು ಹಾಗೂ ಉಳಿದ ಕಾಲಾವಧಿಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಪರಿಶೀಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಕಾಲಕಾಲಕ್ಕೆ ಸಭೆ ಜರುಗಿಸಿ ಸಹಕಾರ ನೀಡಲು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಉಪವಿಭಾಗಾಧಿಕಾರಿ ವಿವೇಕಾನಂದ, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಆಲಂ ಭಾಷಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಥಣಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ: ಲಕ್ಷ್ಮಣ ಸವದಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿಆ.೧೪ರಂದು ’ಉತ್ಸವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ’ ಉದ್ಘಾಟನೆವಿದ್ಯಾರ್ಥಿ ದಶೆಯಲ್ಲೇ ವಿವಿಧ ಕೌಶಲ ಮೈಗೂಡಿಸಿಕೊಂಡರೆ ಭವಿಷ್ಯ ಭದ್ರ: ಸಂಗಮೇಶ ಹಳ್ಳೂರದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮೇಲಿನ ಮೂರೂ ದೋಷಾರೋಪಗಳು ಸಾಬೀತು: ಸಂಸದೀಯ ತನಿಖಾ ಸಮಿತಿಯ ಸ್ಫೋಟಕ ವರದಿಇಂಡಿ: ಹಿರೇಮಸಳಿ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕಾರ್ಫ್ ವಿತರಣೆ; ಹೊಸೂರು ಕುಟುಂಬದ ಶೈಕ್ಷಣಿಕ ಕಾಳಜಿಗೆ ಶ್ಲಾಘನೆನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮ, ರಾಜಪಾಲರ ಅನುಮೋದನೆಗೆ ಕಾಯುತ್ತಿರುವ ಸಚಿವರುಕೆಪಿಎಸ್‌ಸಿ ಅಕ್ರಮ ಆರೋಪದ ಬಿಸಿ: ಪರೀಕ್ಷಾ ನಿಯಂತ್ರಕರ ಎತ್ತಂಗಡಿ, ಆಯೋಗಕ್ಕೆ ಹೊಸ ಐಎಎಸ್ ಅಧಿಕಾರಿಗಳ ಸರಪಳಿ ಪಾಲಿಕೆಗೆ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆಚಂದ್ರನ ಮೇಲಿನ ಶಾಶ್ವತ ಮಾನವ ನೆಲೆ ನಿರ್ಮಾಣಕ್ಕೆ ಇಸ್ರೋ ಜೊತೆ ಕೈಜೋಡಿಸಲು ಮುಂದಾದ ನಾಸಾ