ಬಳ್ಳಾರಿ:19;.. ನಗರದ ಕೌಲ್‌ಬಜಾರ್‌ನ ಬಟ್ಟಿ ಏರಿಯಾ ಪ್ರದೇಶದಲ್ಲಿ ಜುಲೈ 16ರಂದು ನಡೆದ ನಬಿ ರಸೂಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮರ್ಪಕ ತನಿಖೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೃತ ನಬಿ ರಸೂಲ್ ಅವರ ಸಹೋದರಿ ಆರಿಫಾ ರಸೂಲ್ ಆರೋಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ತಮ್ಮನ ಹತ್ಯೆ ಪ್ರಕರಣದಲ್ಲಿ ಆತನ ಪತ್ನಿ ಸಲ್ಮಾ ಅವರು ₹30 ಸಾವಿರ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ ನೈಜಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸಲ್ಮಾ ಹಾಗೂ ಅವರ ತಂದೆ-ತಾಯಿ ನಬಿ ರಸೂಲ್ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ ಆರಿಫಾ, ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಜೈಲಿನಿಂದ ಹೊರಬಂದು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. ಆದರೆ ತಮ್ಮ ತಮ್ಮನ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಬಿ ರಸೂಲ್ ಹತ್ಯೆ ಪ್ರಕರಣದಲ್ಲಿ ಸುಮಾರು 12 ಮಂದಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹಾಗೂ ಕುಟುಂಬದ ಅನುಮಾನಗಳಿದ್ದರೂ, ಪೊಲೀಸರು ಕೇವಲ ನಾಲ್ವರನ್ನು ಮಾತ್ರ ಬಂಧಿಸಿದ್ದಾರೆ ಎಂದು ಆರಿಫಾ ಆರೋಪಿಸಿದರು. ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನೂ ವಿಚಾರಣೆಗೊಳಪಡಿಸಿ, ಅವರ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಲ್ಮಾ ಅವರ ಮೊಬೈಲ್ ಫೋನ್‌ನಿಂದ ಶಾಹಿದ್ ಅವರ ಫೋನ್‌ಗೆ ನಬಿ ರಸೂಲ್ ಹತ್ಯೆಯಾಗುವವರೆಗೂ ನಿರಂತರವಾಗಿ ಕರೆಗಳು ಹಾಗೂ ಮಾತುಕತೆಗಳು ನಡೆದಿವೆ ಎಂದು ಆರಿಫಾ ಆರೋಪಿಸಿದರು. ಈ ಕರೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಮಾ ಅವರ ಮೊಬೈಲ್‌ನಿಂದ ಅಳಿಸಲಾಗಿದೆ ಎಂಬ ಅನುಮಾನವಿದೆ. ಸಲ್ಮಾ ಅವರ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದರೂ, ಈವರೆಗೆ ಕರೆ ವಿವರಗಳನ್ನು ಸಮರ್ಪಕವಾಗಿ ಹೊರತೆಗೆದು ಪರಿಶೀಲಿಸಿಲ್ಲ ಎಂದು ಅವರು ದೂರಿದರು.
ಅಲ್ಲದೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವರ ಬಟ್ಟೆಗಳನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲಾಗಿದೆ ಎಂಬ ಆರೋಪವನ್ನೂ ಆರಿಫಾ ಮಾಡಿದರು. ಈ ಎಲ್ಲ ಅಂಶಗಳನ್ನು ತನಿಖೆಯ ಭಾಗವಾಗಿ ಪರಿಶೀಲಿಸಿ, ಲಭ್ಯವಿರುವ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
ನಬಿ ರಸೂಲ್ ಹಾಗೂ ಸಲ್ಮಾ ಅವರ ನಡುವಿನ ಕೌಟುಂಬಿಕ ವಿಚಾರಗಳ ಜೊತೆಗೆ ಸಲ್ಮಾ ಮತ್ತು ಶಾಹಿದ್ ನಡುವಿನ ಸಂಬಂಧದ ಬಗ್ಗೆಯೂ ಅನುಮಾನಗಳಿವೆ ಎಂದು ಆರಿಫಾ ಆರೋಪಿಸಿದರು. ಕೆಲವರು ಸೇರಿ ಪೂರ್ವಯೋಜಿತವಾಗಿ ತಮ್ಮ ತಮ್ಮನನ್ನು ಹತ್ಯೆ ಮಾಡಿದ್ದಾರೆ ಎಂಬುದು ಕುಟುಂಬದ ಅನುಮಾನವಾಗಿದ್ದು, ಈ ಕುರಿತು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು. ಕರೆ ದಾಖಲೆಗಳು ಸೇರಿದಂತೆ ಲಭ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿ, ಪ್ರಕರಣದ ತನಿಖೆಯನ್ನು ಸಮಗ್ರವಾಗಿ ನಡೆಸುವ ಮೂಲಕ ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆರಿಫಾ ರಸೂಲ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಫಿರ್ದೋಸ್, ಮಾಸನ್, ಬಷೀರ್ ಅಹ್ಮದ್, ಶಿವಕುಮಾರ್, ಮೂಗೇಶ್, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.