ಬೀಳಗಿ - ಗಾಣಿಗ ಸಮಾಜದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ರಕ್ತಗತವಾಗಿ ಬಂದಿದೆ. ಸಮಾಜ ಬಾಂಧವರು ಸಂಘಟಿತರಾಗಿ ಒಳ್ಳೆಯವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು.ಅದಕ್ಕಾಗಿ ಸಮಾಜದಲ್ಲಿ ಒಗ್ಗಟ್ಟು ಹೆಚ್ಚಾಗಬೇಕಿದೆ, ಬೀಳಗಿಯಲ್ಲಿ ಗಾಣಿಗ ಸಮಾಜ ಮತದಾರರು ಹೆಚ್ಚಿರುವುದರಿಂದ ಸಮಾಜದವರೇ ಖಾಯಂ ಶಾಸಕರಾಗಿರಬೇಕು ಎಂದು ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ದೇವಸ್ಥಾನದಲ್ಲಿ ತಾಲೂಕು ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ, ತಾಲೂಕು ನೌಕರರ ಕ್ಷೇಮಾಭಿವೃದ್ಧಿ ಸಂಘ, ಗಾಣಿಗ ಸಮಾಜದ ಯುವ ಘಟಕ, ಮಹಿಳಾ ಘಟಕ, ನಗರ ಘಟಕ ಹಾಗೂ ಜ್ಯೋತಿ ಪತ್ತಿನ ಸಹಕಾರಿ ಸಂಘ ನಿ., ಬೀಳಗಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಅಧಿಕಾರ ಇದ್ದಾಗ, ಇಲ್ಲದೇ ಇರುವಾಗಲೂ ಸಮಾಜಮುಖಿ ಆಗಿರಬೇಕು. ಸಮಾಜದಲ್ಲಿ ಒಳ್ಳೆಯದನ್ನು ಮಾಡಿದವರ ಕುರಿತು ಚಿಂತನೆ ಮಾಡಬೇಕು ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಸರನಾಡಗೌಡ ಮಾತನಾಡಿ, ಗಾಣಿಗ ಸಮಾಜ ವ್ಯಾಪಾರಿ ಮನೋಭಾವದವರಲ್ಲ. ಕೃಷಿಯನ್ನು ಅವಲಂಭಿಸಿದೆ. ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಮುನ್ನುಗ್ಗಿದಾಗ ರಾಜಕೀಯವಾಗಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಅಶೋಕ ನವಲಗುಂದ ಮಾತನಾಡಿ, ರಾಜ್ಯದಲ್ಲಿ ಗಾಣಿಗ ಸಮಾಜ ೪೫ ಲಕ್ಷ ಜನಸಂಖ್ಯೆ ಹೊಂದಿದೆ. ೫೦ ಎಂಎಲ್‌ಎಗಳು ಆಯ್ಕೆಯಾಗುವಷ್ಟು ಪ್ರಾಭಲ್ಯ ಹೊಂದಿದೆ. ರಾಜಕೀಯ ಪಕ್ಷಗಳು ಕೇವಲ ಐದಾರು ಜನರಿಗೆ ಮಾತ್ರ ಟಿಕೆಟ್ ಕೊಡುತ್ತಿವೆ. ಹೀಗಾಗಿ ಸಮಾಜದ ಶಕ್ತಿ ತೋರಿಸಲು ಹಿಂದೇಟು ಬೇಡ ಎಂದರು.
ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ಗಾಣಿಗ ಸಮಾಜ ಜಗತ್ತಿಗೆ ಬೆಳಕು ಕೊಟ್ಟ ಸಮಾಜ. ಸಮಾಜ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಂದೆ ಬರಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಜೊತೆಗೆ ಪಾಲಕರು ಒಳ್ಳೆಯ ಸಂಸ್ಕಾರ ಕೊಡಬೇಕು. ಅಧಿಕಾರ ದೊರೆತಾಗ ಕಷ್ಟದಲ್ಲಿರುವವರು, ಬಡವರು, ಪ್ರತಿಭಾನ್ವಿತರಿಗೆ ಸಹಾಯ, ಸಹಕಾರ ಮಾಡಬೇಕು ಎಂದರು.
ಗಾಣಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಅಶೋಕ ಶಿರೂರ ಮಾತನಾಡಿ, ಸಮಾಜ ಬಾಂಧವರು ಒಗ್ಗಟ್ಟಾಗಿ ರಾಜಕೀಯ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
ಸಮಾಜದ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗೇಶ ಮಾತನಾಡಿ, ಸಾಧಕರು ಸಮಾಜಕ್ಕೆ ಮಾರ್ಗದರ್ಶಿಗಳಾಗಬೇಕು. ಮಕ್ಕಳು ದುಶ್ಚಟಗಳಿಗೆ ಹೋಗದಂತೆ ತಂದೆತಾಯಿಗಳು ಸೂಕ್ತ ತಿಳುವಳಿಕೆ ನೀಡಬೇಕು ಎಂದರು.
ಗಾಣಿಗ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಸಾಧಕರನ್ನು ಸನ್ಮಾನಿಸಲಾಯಿತು.
ಮನ್ನಿಕೇರಿ ದಿಗಂಬರೇಶ್ವರ ಮಠದ ನಿರ್ವಾಣ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಹನಮಂತ ಸೂಳಿಕೇರಿ ಅಧ್ಯಕ್ಷತೆ ವಹಿಸಿದ್ದರು
ಸಮಾಜದ ಗಣ್ಯರಾದ ಆರ್. ಜಿ. ಪಾಟೀಲ, ಬಸವರಾಜ ಯಂಕAಚಿ, ವಿನೋದ ಹತ್ತಳ್ಳಿ, ನಿಂಗಣ್ಣ ಗೋಡಿ, ಶೇಖರಗೌಡ ವಿ. ಪಾಟೀಲ, ಅಶೋಕ ಲಾಗಲೋಟಿ, ಪ್ರಕಾಶ ಗಾಣಿಗೇರ, ಸದಾಶಿವ ಹಲಗಲಿ, ಶಿವಪ್ಪ ಅವಟಿ, ಶಿವಪ್ಪ ಬೊಮ್ಮಣ್ಣವರ, ಬಿ ಕೆ ಸುಳ್ಳದ, ನಿಂಗಪ್ಪ ಹುಗ್ಗಿ, ಶೋಭಾ ಬಗಲಿ, ಹಣಮಂತ ಮೆಳ್ಳಿಗೇರಿ ಉಪಸ್ಥಿತರಿದ್ದರು.
ಬೀಳಗಿ ಪಟ್ಟಣದಲ್ಲಿ ಗಾಣಿಗ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಪೂಜ್ಯರು, ಗಣ್ಯರು ಉದ್ಘಾಟಿಸಿದರು.