ಕಾಗವಾಡ: ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೊಸದಿಲ್ಲಿಯ ರಾಮಲೀಲಾ ಮೈದಾನದ ಸ್ಥಳವನ್ನು ‘ಶುದ್ಧೀಕರಣ’ ಮಾಡಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಹಾಗೂ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಕಾಗವಾಡದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಸಂಜಯ ತಳವಲಕರ ಮಾತನಾಡಿ, ಖರ್ಗೆ ಅವರು ಭಾಷಣ ಮಾಡಿದ ಸ್ಥಳದಲ್ಲಿ ಪೂಜೆ, ಮಂತ್ರ ಪಠಣ ಹಾಗೂ ಶುದ್ಧೀಕರಣ ನಡೆಸಿರುವುದು ಖಂಡನೀಯ. ಈ ಕೃತ್ಯವು ಅಸ್ಪೃಶ್ಯತೆ ಆಚರಣೆಗೆ ಕಾರಣವಾಗಿದ್ದು, ಸಂವಿಧಾನದ 17ನೇ ವಿಧಿಯ ಆಶಯಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.
ಸಂಬಂಧಪಟ್ಟ ಸಂಘಟನೆಯ ವಿರುದ್ಧ ಕಾನೂನು ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಇಂತಹ ಘಟನೆಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಹರಡದಂತೆ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ತಹಶೀಲ್ದಾರ್ ಕಚೇರಿಯ ಹಿರಿಯ ಅಧಿಕಾರಿ ಎಂ.ಆರ್. ಪಾಟೀಲ, ಉಪತಹಶೀಲ್ದಾರ್ ಅಣ್ಣಾಸಾಹೇಬ ಕೋರೆ ಹಾಗೂ ಪಿಎಸ್‌ಐ ರಾಘವೇಂದ್ರ ಖೋತ್ ಅವರು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಮುಖಂಡರಾದ ಮಚ್ಚೇಂದ್ರ ಖಾಂಡೇಕರ, ಅಮೀನ್ ಜಾತಗಾರ, ಕುಮಾರ ಬನಸೋಡೆ, ರವಿ ಕಾಂಬಳೆ, ಕಾಗವಾಡ ತಾಲೂಕು ಅಧ್ಯಕ್ಷ ಸಚಿನ್ ಪೂಜಾರಿ, ನ್ಯಾಯವಾದಿ ಉಮೇಶ ಮನೋಜ,ಪ್ರಕಾಶ ದೊಂಡಾರೆ, ಜಯಾಪಲ ಬಡಿಗೇರ, ಮಲ್ಲಿಕಾರ್ಜುನ ಕಾಂಬಳೆ, ಉದಯ ಖೋಡೆ,ವಿಶಾಲ ದೊಂಡಾರೆ, ಸುನೀಲ ಕಾಂಬಳೆ,ಪ್ರಕಾಶ ಕಾಂಬಳೆ, ರವಿ ಕುರ್ಣೆ,ಬಾಳಕೃಷ್ಣ ಭಜಂತ್ರಿ,ಬಾಪು ದೊಂಡಾರೆ, ವಿದ್ಯಾಧರ ದೊಂಡಾರೆ, ಅನಿಲ ಕಾಂಬಳೆ, ವಿನೋದ ದೇವಣೆ ,
ಸಂಘಟನೆಗಳ ಜಿಲ್ಲಾ ಹಾಗೂ ತಾಲೂಕು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.