ಬೆಳಗಾವಿ: ತಾಲೂಕಿನ ಮುತಗಾ ಗ್ರಾಮದ ಕಂಚವೀರ ನಗರದಲ್ಲಿ ಕಳೆದ 30 ವರ್ಷಗಳಿಂದ ಸೂಕ್ತ ಮತ್ತು ಶಾಶ್ವತ ಒಳಚರಂಡಿ ವ್ಯವಸ್ಥೆ ಇಲ್ಲದೆ ನೂರಾರು ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ಆರೋಪಿಸಿ ಕಂಚವೀರ ನಗರ ರಹವಾಸಿಗಳ ಸಂಘವು ಹಲವು ಭಾರಿ ಗ್ರಾಮ ಪಂಗೆ ಹಾಗೂ ಸಂಭದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಸಿದರು ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಅಧಿಕಾರಿಗಳ ವಿರದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಂಚವೀರ ಬಡಾವಣೆಯಲ್ಲಿ ವ್ಯವಸ್ಥಿತ ಭೂಗತ ಒಳಚರಂಡಿ ಪೈಪ್ಲೈನ್ ವ್ಯವಸ್ಥೆ ಇಲ್ಲದ ಪರಿಣಾಮ ಮನೆಗಳಿಂದ ಹೊರಬರುವ ಕೊಳಚೆ ನೀರು ಸಾರ್ವಜನಿಕ ರಸ್ತೆಗಳಲ್ಲಿ ಹರಿದು ನಿಂತುಕೊಳ್ಳುತ್ತಿದೆ. ಇದರಿಂದ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡುವುದರ ಜೊತೆಗೆ ಸೊಳ್ಳೆ, ನೊಣ ಹಾಗೂ ಇತರ ಕೀಟಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ಹಾಗೂ ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ನಿವಾಸಿಗಳಲ್ಲಿ ಮನೆಮಾಡಿದೆ ಎಂದು ಆರೋಪಿಸಿದರು.
ಕಳೆದ ಮೂರು ದಶಕಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಮೂಲಸೌಕರ್ಯದ ಕೊರತೆಯಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಬಡಾವಣೆಯ ನಿವಾಸಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದರು.
ತುರ್ತು ಕ್ರಮಕ್ಕೆ ಆಗ್ರಹ: ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ಸಂಬಂಧಪಟ್ಟ ನಾಗರಿಕ ಮತ್ತು ಎಂಜಿನಿಯರಿಂಗ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕಂಚವೀರ ನಗರದಲ್ಲಿ ಹೊಸ ಹಾಗೂ ಸಮರ್ಪಕ ಒಳಚರಂಡಿ ಪೈಪ್ಲೈನ್ ವ್ಯವಸ್ಥೆ ತುರ್ತಾಗಿ ನಿರ್ಮಿಸಿ, ನಿವಾಸಿಗಳ ಬಹುದಿನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.