LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Dharwad

 ಉತ್ತರ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುರೇಶ್ ಹೆಬ್ಳೀಕರ್‌ಗೆ ಜೀವಮಾನ ಸಾಧನೆ ಪುರಸ್ಕಾರ

ಧಾರವಾಡ:  ಉತ್ತರ ಕರ್ನಾಟಕದ ಚಿತ್ರರಂಗದ ಪ್ರತಿಭೆಗಳಿಗೆ ಹೊಸ ವೇದಿಕೆ ಹಾಗೂ ಹೊಸ ಅವಕಾಶಗಳ ಭರವಸೆ ಮೂಡಿಸುವ ಮೂಲಕ ಧಾರವಾಡದಲ್ಲಿ ನಡೆದ ‘ಉತ್ತರ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ–2026’ ಗಮನ ಸೆಳೆಯಿತು. ಆಗಸ್ಟ್ 22 ಮತ್ತು 23ರಂದು ಕರ್ನಾಟಕ ಕುಲಪುರೋಹಿತ ಡಾ. ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಎರಡು ದಿನಗಳ ಚಿತ್ರೋತ್ಸವದಲ್ಲಿ ಚಿತ್ರರಂಗದ ಗಣ್ಯರು, ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು ಭಾಗವಹಿಸಿ ಉತ್ತರ ಕರ್ನಾಟಕದ ಸಿನಿಮಾ ಕ್ಷೇತ್ರದ ಬೆಳವಣಿಗೆ ಕುರಿತು ಚರ್ಚಿಸಿದರು.
ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಹಿರಿಯ ನಟ ಹಾಗೂ ನಿರ್ದೇಶಕ ಸುರೇಶ್ ಹೆಬ್ಳೀಕರ್ ಅವರು, ಮುಂದಿನ ದಿನಗಳಲ್ಲಿ ತಮ್ಮ ನೆಚ್ಚಿನ ಜಿಲ್ಲೆ ಧಾರವಾಡದಲ್ಲಿ ಸಿನಿಮಾಗಳನ್ನು ನಿರ್ದೇಶಿಸುವ ತಮ್ಮ ಹಂಬಲವನ್ನು ವ್ಯಕ್ತಪಡಿಸಿದರು. ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಒಂದು ಕಾಲಘಟ್ಟದ ಚರಿತ್ರೆಯನ್ನು ದಾಖಲಿಸುವುದರ ಜೊತೆಗೆ ಸಮಾಜದ ಸಾಂಸ್ಕೃತಿಕ ನೆಲೆ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಬಲ ಮಾಧ್ಯಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಕಲಾ ಸೇವೆ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಗಾಗಿ ಸುರೇಶ್ ಹೆಬ್ಳೀಕರ್ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಈ ಚಿತ್ರೋತ್ಸವಕ್ಕೆ ಸಂಸದ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರು ಇದ್ದು, ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಭಾಗದಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆತರೆ ಉತ್ತರ ಕರ್ನಾಟಕವೂ ಚಿತ್ರರಂಗದ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಸಿನಿಮಾ ನೈಜ ಜೀವನದ ಪ್ರತಿಬಿಂಬವಾಗಿದ್ದು, ಉತ್ತಮ ಸಿನಿಮಾಗಳು ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು. ಸಿನಿಮಾ ಮತ್ತು ಸಮಾಜದ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವಂತಹ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.
ಭಾನುವಾರ ನಡೆದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟಕರಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹಾಗೂ ನಟ ಅನಿರುದ್ ಜಟ್ಕರ್ ಭಾಗವಹಿಸಿದರು. ಧಾರವಾಡದ ಮೇಲಿನ ತಮ್ಮ ವಿಶೇಷ ಒಲವನ್ನು ವ್ಯಕ್ತಪಡಿಸಿದ ಅವರು, ಈ ಭಾಗದ ಸಿನಿಮಾ ಹಾಗೂ ಕಲಾ ಕ್ಷೇತ್ರದ ಬೆಳವಣಿಗೆಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಹಿರಿಯ ನಟಿ ಭವ್ಯಾ ಅವರು ಧಾರವಾಡವನ್ನು ಸಾಹಿತಿಗಳು, ಕಲಾವಿದರು ಹಾಗೂ ಗಾಯಕರು ಬೆಳೆದ ಪುಣ್ಯಭೂಮಿ ಎಂದು ಬಣ್ಣಿಸಿದರು. ಗ್ಯಾರಂಟಿ ನ್ಯೂಸ್ ಪ್ರಧಾನ ಸಂಪಾದಕಿ ರಾಧಾ ಹಿರೇಗೌಡರ್ ಅವರು ತಾವು ಕೂಡ ಉತ್ತರ ಕರ್ನಾಟಕದ ಭಾಗದವರಾಗಿದ್ದು, ಈ ಭಾಗದ ಹಿತಕ್ಕಾಗಿ ನಡೆಯುವ ಯಾವುದೇ ರೀತಿಯ ಹೋರಾಟಕ್ಕೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.‌
ನ್ಯೂಸೋ ನ್ಯೂಸ್ ಚಾನೆಲ್‌ನ ಪ್ರಧಾನ ಸಂಪಾದಕ ಹರೀಶ್ ನಾಗರಾಜು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕಲಾವಿದರಿದ್ದು, ಇಲ್ಲಿನ ಜನರು ಸಿನಿಮಾವನ್ನು ಹೃದಯಪೂರ್ವಕವಾಗಿ ಪ್ರೋತ್ಸಾಹಿಸುತ್ತಾರೆ ಎಂದು ಹೇಳಿದರು. ಮುಂದಿನ ವರ್ಷ ಇನ್ನಷ್ಟು ದೊಡ್ಡ ಆವರಣದಲ್ಲಿ ಚಿತ್ರೋತ್ಸವ ನಡೆಯುವಷ್ಟು ಮಟ್ಟಿಗೆ ಕಾರ್ಯಕ್ರಮ ಬೆಳೆಯಲಿ ಎಂದು ಅವರು ಆಶಿಸಿದರು.
ಮಂಡಳಿಯ ಅಧ್ಯಕ್ಷರಾದ ಶ್ರೀ ಮಂಜುನಾಥ್ ಹಗೇದಾರರು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಡೆದು ಬಂದ ಹಾದಿ, ಇದುವರೆಗೆ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಸಾಧಿಸಿರುವ ಪ್ರಗತಿಯ ಕುರಿತು ವಿವರವಾಗಿ ಮಾತನಾಡಿದರು. 
ಮಂಡಳಿಯ ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ್ ಸ್ವಾಗತಮಾಡಿ ಉತ್ತರ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ರೂಪರೇಷೆ, ಉದ್ದೇಶ ಹಾಗೂ ಮತ್ತು ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಂಪೂರ್ಣ ವಿವರಣೆಯನ್ನು ವಿಸ್ತಾರವಾಗಿ ತಿಳಿಸಿ ವಂದನಾರ್ಪಣೆ ಮಾಡಿದರು.
ಚಿತ್ರೋತ್ಸವದ ವಿವಿಧ ವಿಭಾಗಗಳಲ್ಲಿ ಜ್ಯೂರಿಗಳು ಆಯ್ಕೆ ಮಾಡಿದ ಅತ್ಯುತ್ತಮ ಕೃತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ‘ಸಮಯ’, ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ‘ರತ್ನಗರ್ಭ’, ಅತ್ಯುತ್ತಮ ಆಲ್ಬಂ ಸಾಂಗ್ ವಿಭಾಗದಲ್ಲಿ ‘ಮನಸೇ ಮನಸೇ’ ಹಾಗೂ ಅತ್ಯುತ್ತಮ ಟೆಲಿಫಿಲ್ಮ್ ವಿಭಾಗದಲ್ಲಿ ‘ಶ್ರೀಗಂಧ’ ಪ್ರಶಸ್ತಿಗೆ ಪಾತ್ರವಾದವು. ಹೊಸ ಪ್ರತಿಭೆಗಳಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳು ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆ ಮೂಡಿದೆ.
ಉತ್ತರ ಕರ್ನಾಟಕದ ಚಿತ್ರಾಸಕ್ತರಿಗೆ ಹೊಸ ಚೈತನ್ಯ ನೀಡುವುದು, ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುವುದು ಹಾಗೂ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಚಿತ್ರೋತ್ಸವವು ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿತು. ಎರಡು ದಿನಗಳ ಕಾರ್ಯಕ್ರಮದಲ್ಲಿ ಚಿತ್ರರಂಗದ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ ಹಾಗೂ ಸ್ಥಳೀಯ ಪ್ರತಿಭೆಗಳ ಪಾಲ್ಗೊಳ್ಳುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಚಿತ್ರೋತ್ಸವದ ಯಶಸ್ಸಿನಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಸದಸ್ಯರು ಪ್ರಮುಖ ಪಾತ್ರ ವಹಿಸಿದರು. ಮಂಡಳಿ ಅಧ್ಯಕ್ಷ ಮಂಜುನಾಥ್ ಹಗೇದಾರ, ಕಾರ್ಯಾಧ್ಯಕ್ಷ ಕಲ್ಮೇಶ್ ಹಾವೇರಿಪೇಟ, ಉಪಾಧ್ಯಕ್ಷ ಪ್ರಭು ಹಂಚಿನಾಳ್, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ್, ಸಹ ಕಾರ್ಯದರ್ಶಿ ಅಶ್ಪಾಕ್ ಸೈಯದ್, ಸಂಘಟನಾ ಕಾರ್ಯದರ್ಶಿ ಪ್ರವೀಣಾ ಕುಲಕರ್ಣಿ, ಖಜಾಂಚಿ ಕಿರಣ ಸಿದ್ದಾಪೂರ, ನಿರ್ದೇಶಕ ಎನ್.ಎ. ದೇಸಾಯಿ ಹಾಗೂ ಕಾರ್ಯಕ್ರಮದ ಚೇರ್ಮನ್ ಡಾ. ನಾಗೇಂದ್ರ ಮಾಗಡಿ ಸೇರಿದಂತೆ ಸಲಹಾ ಸಮಿತಿಯ ಸದಸ್ಯರು ಮತ್ತು ಜ್ಯೂರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿ ಹಂತ ಭವಿಷ್ಯದ ಭದ್ರ ಬುನಾದಿ: ಕಾಲೇಜಿನಲ್ಲಿ ಅಶೋಕ ಪಟ್ಟಣ ಹೇಳಿಕೆರಾಮದುರ್ಗದಲ್ಲಿ ವಿಜೃಂಭಿಸಿದ ಶಬರಿ ಉತ್ಸವ: ಜಾನಪದ ಕಲೆ ಉಳಿಸುವಂತೆ ಯುವಜನತೆಗೆ ಕರೆ1501ನೇ ಪ್ರವಾದಿ ಹಝರತ್ ರ್  ಪ್ರಾರ್ಥನಾ ಕಾರ್ಯ ಕ್ರಮ ದಲ್ಲಿ  ಶಾಸಕರ ಪುತ್ರ  ಹೆಚ್. ಜಿ. ಗುರುದತ್ತ ಭಾಗಿಬ್ "ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಇರಲಿ"ತಾಳಿಕೋಟೆ ತಾಲೂಕಿನ ಮೇಲೈಶ್ವರ ಗ್ರಾಮದಲ್ಲಿ ೨೦ ಎಕರೆ ಹತ್ತಿ ಹೊಲ ೧೦ ಗಂಟೆಗಳಲ್ಲಿ ಹರಗಿ ಸಾಧನೆಗೈದ ಜೊಡೆತ್ತುಗಳು ಅಂಗನವಾಡಿ ಕಾರ್ಯಕರ್ತೆಯರ 32 ಬೇಡಿಕೆಗಳ ಈಡೇರಿಕೆಗೆ ಒತ್ತಾಯತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಸ್‌ಇಎಸ್ ವಿದ್ಯಾಮಂದಿರ ವಿದ್ಯಾರ್ಥಿಗಳಿಗೆ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆಬಳ್ಳಾರಿಯಲ್ಲಿ ರೈತ ಸಂತೆ ಆರಂಭ: ಮಧ್ಯವರ್ತಿಗಳಿಗೆ ಬ್ರೇಕ್; ರೈತರಿಂದಲೇ ಗ್ರಾಹಕರಿಗೆ ನೇರ ಮಾರಾಟ ಬಳ್ಳಾರಿ ಕೋಲ್ ಬಜಾರ್‌ನಲ್ಲಿ ಈದ್ ಮಿಲಾದ್ ಅಂಗವಾಗಿ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗಿಈದ್‌ಮಿಲಾದ್ ಆಚರಣೆಯಲ್ಲಿ  ಸಾವಿರಾರು ಮಂದಿ ಭಾಗಿ; ಶಾಂತಿಯುತವಾಗಿ ನಡೆದ ಭವ್ಯ ರ‍್ಯಾಲಿ