ಬಳ್ಳಾರಿ: 04:.ನಗರದ ರಾಯಲ್ ಕಾಲೋನಿಯ ಶ್ರೀ ವಿಠಲ ಕೃಷ್ಣ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಅದ್ಧೂರಿಯಾಗಿ ನಡೆಯಿತು.
ಧರ್ಮ ಸಂಸ್ಥಾಪನೆಗಾಗಿ ಪ್ರತಿ ಯುಗದಲ್ಲೂ ಅವತರಿಸುವ ಶ್ರೀಕೃಷ್ಣನ ಜನ್ಮದಿನವನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ಮಹಾಭಿಷೇಕ ಹಾಗೂ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಬಳಿಕ ಶ್ರೀಕೃಷ್ಣನಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಆರತಿ ಬೆಳಗಿ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು.
ಸುಮಂಗಲೆಯರು ಕೃಷ್ಣನ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ತೂಗಿಸಿ ಲಾಲಿ ಹಾಡುವ ಮೂಲಕ ಸಂಭ್ರಮಿಸಿದರು. ಪುಟಾಣಿ ಮಕ್ಕಳು ಕೂಡ ವಿವಿಧ ಭಕ್ತಿಗೀತೆ ಹಾಗೂ ಕೀರ್ತನೆಗಳನ್ನು ಹಾಡಿ ಗಮನ ಸೆಳೆದರು.
ಇನ್ನೂ ಕೃಷ್ಣನ ಉತ್ಸವ ಮೂರ್ತಿಯನ್ನು ನಗರ ಪ್ರದಕ್ಷಿಣೆ ಮೂಲಕ ಮನೆ ಮನೆಗೆ ಕರೆದೊಯ್ಯಲಾಯಿತು. ಮನೆಗೆ ಆಗಮಿಸಿದ ಕೃಷ್ಣನ ಉತ್ಸವ ಮೂರ್ತಿಗೆ ಭಕ್ತರು ಹಾಲು, ಮೊಸರು ಅರ್ಪಿಸಿ ಆರತಿ ಬೆಳಗಿದರು. ಮಹಿಳೆಯರು ಕೋಲಾಟ ಆಡುತ್ತಾ ಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸಿದರು.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಂಜೆ ರಾಯಲ್ ಕಾಲೋನಿಯ ಕೃಷ್ಣ ದೇಗುಲದ ಮುಂಭಾಗದಲ್ಲಿ ಮೈಸೂರು ರಾಮಚಂದ್ರಾಚಾರ್ ಅವರಿಂದ
ದಾಸವಾಣಿ ಸಂಗೀತ ಕಾರ್ಯಕ್ರಮ ಭಕ್ತರ ಮನಸೂರೆಗೊಳಿಸಿತು. ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ರಾವ್, ಜಿ.ವಿ.ಪಟವಾರಿ, ಚಿದಂಬರ, ರಘುರಾಮ್, ಕೃಷ್ಣಮೂರ್ತಿ ಉದಯ್, ಪ್ರಾಣೇಶ್, ರಾಘವೇಂದ್ರ ರಾವ್, ಅಕ್ಷಯ, ವೆಂಕಟೇಶ್, ಶೋಭಾರಾಣಿ, ಸುನಿತಾ, ಕವಿತಾ, ಮಮತಾ, ಹರಿಪ್ರಿಯಾ, ವೇದಾವತಿ, ವೀಣಾ, ಲಕ್ಷ್ಮೀ, ರಮಾ, ವಿಜಯಲಕ್ಷ್ಮೀ, ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.