ತಾಳಿಕೋಟೆ, ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸುವ ಅಗತ್ಯವಿದೆ. ಸಮಾಜದಲ್ಲಿ ಜಾತಿ-ಜಾತಿಗಳಾಗಿ ವಿಭಜನೆಯಾದರೆ ದೇಶದ ಏಕತೆಗೆ ಧಕ್ಕೆಯಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ಹೇಳಿದರು.
ತಾಳಿಕೋಟೆಯಲ್ಲಿ ಭಗತ್ ಸಿಂಗ್ ಯುವಕ ಮಂಡಳಿಯ ಗಣೇಶೋತ್ಸವದ ದಶಮಾನೋತ್ಸವ ಅಂಗವಾಗಿ ಸೋಮವಾರರಂದು ಆಯೋಜಿಸಲಾದ ಹಿಂದೂ ಏಕತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಜಾಗೃತಗೊಳಿಸುವ ಹಾಗೂ ಜನರನ್ನು ಒಗ್ಗೂಡಿಸುವ ವೇದಿಕೆಗಳಾಗಬೇಕು ಎಂದರು. ಕೆಲವು ಕಡೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿಧಿಸಲಾಗುವ ನಿರ್ಬಂಧಗಳ ಕುರಿತು ಮಾತನಾಡಿದ ಅವರು, ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಮತ್ತು ಸಮಾನ ಕಾನೂನು ಅನ್ವಯವಾಗಬೇಕು. ಯಾವುದೇ ಸಮುದಾಯದ ಧಾರ್ಮಿಕ ಆಚರಣೆಗೆ ಅನಗತ್ಯ ನಿರ್ಬಂಧ ಇರಬಾರದು ಎಂದು ಹೇಳಿದರು.
ಭಗತ್ ಸಿಂಗ್ ಯುವಕ ಮಂಡಳಿ ಹತ್ತು ವರ್ಷಗಳ ನಂತರ ಹಿಂದೂ ಏಕತಾ ಸಮಾವೇಶದಂತಹ ದೊಡ್ಡ ಕಾರ್ಯಕ್ರಮದ ಮೂಲಕ ಯುವಕರನ್ನು ಒಗ್ಗೂಡಿಸುತ್ತಿರುವುದು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿದೆ. ನಾವು ಒಗ್ಗಟ್ಟಾಗದೆ ಜಾತಿ-ಜಾತಿಗಳಾಗಿ ಒಡೆದುಹೋದರೆ ದೇಶದ ಏಕತೆ ದುರ್ಬಲವಾಗುತ್ತದೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಬೆಳವಣಿಗೆಗಳ ಕುರಿತು ಮಾತನಾಡಿದ ಯತ್ನಾಳ್, ಹಿಂದೂ ಸಮಾಜವು ತನ್ನ ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ಬಗ್ಗೆ ಜಾಗೃತವಾಗಿರಬೇಕು ಎಂದ ಅವರು ಗಣೇಶೋತ್ಸವವು ಲೋಕಮಾನ್ಯ ಬಾಲ ಗಂಗಾಧರ ತಿಲಕರು ಮನೆಯೊಳಗೆ ನಡೆಯುತ್ತಿದುದ್ದನ್ನು ಸಾರ್ವಜನಿಕವಾಗಿ ಆಚರಿಸುವಂತೆ ಮಾಡಿದ ಉದ್ದೇಶ ಹಿಂದೂ ಸಮಾಜವನ್ನು ಒಗ್ಗೂಡಿಸುವುದಾಗಿತ್ತು. ಜಾತಿ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಒಂದಾಗಿ ಗಣೇಶೋತ್ಸವ ಆಚರಿಸುವ ಮೂಲಕ ಸಮಾಜವನ್ನು ಸಂಘಟಿಸುವ ಕೆಲಸ ನಡೆಯಬೇಕು ಎಂದರು.
ತಾಳಿಕೋಟೆಯಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಜನರು ಒಂದಾಗಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ. ಗಣೇಶನಿಗೆ ಯಾವುದೇ ಜಾತಿಯಿಲ್ಲ. ಗಣೇಶೋತ್ಸವ ಎಲ್ಲರನ್ನು ಒಗ್ಗೂಡಿಸುವ ಉತ್ಸವವಾಗಿದೆ ಭಗತ್ ಸಿಂಗ್, ರಾಜಗುರು, ಸುಖದೇವ್ ಹಾಗೂ ಮದನ್‌ಲಾಲ್ ಧಿಂಗ್ರಾ ಅವರಂತಹ ಕ್ರಾಂತಿಕಾರಿಗಳು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಇಂದಿನ ಯುವಕರು ಅಂತಹ ದೇಶಭಕ್ತರ ಜೀವನದಿಂದ ಪ್ರೇರಣೆ ಪಡೆದುಕೊಳ್ಳಬೇಕು. ಅವರ ತ್ಯಾಗವನ್ನು ಕೇವಲ ಭಾಷಣಗಳಲ್ಲಿ ಸ್ಮರಿಸುವುದಲ್ಲದೆ, ದೇಶದ ಹಿತಕ್ಕಾಗಿ ಕೆಲಸ ಮಾಡುವ ಮೂಲಕ ಗೌರವಿಸಬೇಕು ಎಂದು ಕರೆ ನೀಡಿದರು. ದೇಶದ ಸ್ವಾತಂತ್ರ್ಯ ಮತ್ತು ಏಕತೆಗೆ ಸರ್ದಾರ್ ವಲ್ಲಭಾಯಿ ಪಟೇಲ್ ಹಾಗೂ ಸಂವಿಧಾನ ನಿರ್ಮಾಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕು ದೊರಕುವ ವ್ಯವಸ್ಥೆಯನ್ನು ಸಂವಿಧಾನವು ನೀಡಿದೆ. ಶ್ರೀಮಂತನಾಗಿರಲಿ, ಬಡವನಾಗಿರಲಿ, ಪ್ರತಿಯೊಬ್ಬರ ಮತಕ್ಕೂ ಸಮಾನ ಮೌಲ್ಯವಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಆಡಳಿತಾತ್ಮಕ ವಿಚಾರಗಳಿಗಿಂತ ಜನರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಜೆಗಳ ಸುರಕ್ಷತೆ ಖಾತ್ರಿಪಡಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೀರ್ಘಕಾಲದ ಹೋರಾಟ ನಡೆದಿರುವುದನ್ನು ಪ್ರಸ್ತಾಪಿಸಿ, ಹಿಂದೂ ಸಮಾಜ ತನ್ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಜಾಗೃತವಾಗಿರಬೇಕು ದೇಶದಲ್ಲಿ ಹಿಂದೂ ಸಮಾಜ ಜಾಗೃತವಾಗಿರಬೇಕು. ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ್, ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ವೀರರ ಜೀವನದಿಂದ ಯುವಕರು ಸ್ಫೂರ್ತಿ ಪಡೆಯಬೇಕು ಎಂದು ಕರೆ ನೀಡಿದರು.
ನಮ್ಮ ಕರ್ನಾಟಕದ ನೆಲದಲ್ಲಿ ಸನಾತನ ಧರ್ಮ, ಬಸವಣ್ಣನವರ ವಿಚಾರಧಾರೆ, ವಿವೇಕಾನಂದರ ಚಿಂತನೆ ಹಾಗೂ ಲಿಂಗಾಯತ ಪರಂಪರೆಗೆ ವಿಶೇಷ ಸ್ಥಾನವಿದೆ. ನಮ್ಮ ಮಠಾಧೀಶರು, ಸ್ವಾಮೀಜಿಗಳು ಹಾಗೂ ಧಾರ್ಮಿಕ ಪ್ರಮುಖರು ಸಮಾಜಕ್ಕೆ ಮಾರ್ಗದರ್ಶನ ನೀಡುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ.
ನಾವು ಲಕ್ಷ್ಮೀದೇವಿಯನ್ನು ಪೂಜಿಸುತ್ತೇವೆ, ಬಸವಣ್ಣನವರನ್ನು ಆರಾಧಿಸುತ್ತೇವೆ, ಶಿವ-ಪಾರ್ವತಿಯನ್ನು ಪೂಜಿಸುತ್ತೇವೆ, ಗಣಪತಿಯನ್ನು ಆರಾಧಿಸುತ್ತೇವೆ. ಸೂರ್ಯ, ಚಂದ್ರ, ಗಿಡ-ಮರಗಳು, ನದಿಗಳು, ನೀರು, ಭೂಮಿ ಸೇರಿದಂತೆ ಪ್ರಕೃತಿಯನ್ನೂ ಗೌರವಿಸುತ್ತೇವೆ. ಪ್ರಕೃತಿಯ ಪ್ರತಿಯೊಂದು ಅಂಶದಲ್ಲೂ ದೈವತ್ವವನ್ನು ಕಂಡು, ಅದರ ಮೇಲೆ ಕೃತಜ್ಞತೆ ಮತ್ತು ಪ್ರೀತಿ ಬೆಳೆಸುವ ಪರಂಪರೆ ಸನಾತನ ಧರ್ಮ ಹಿಂದೂ ಧರ್ಮವಾಗಿದೆ ಇಂತಹ ವಿಶಾಲವಾದ ಚಿಂತನೆ ಹೊಂದಿರುವ ಸನಾತನ ಪರಂಪರೆಯ ಬಗ್ಗೆ ಮಾತನಾಡುವಾಗ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮಾತನಾಡಬೇಕು.
ಸನಾತನ ಧರ್ಮದ ಉತ್ತಮ ಮೌಲ್ಯಗಳನ್ನು ಉಳಿಸಿಕೊಂಡು, ಬಸವಣ್ಣನವರ ಸಾಮಾಜಿಕ ಸಂದೇಶ, ಸ್ವಾಮಿ ವಿವೇಕಾನಂದರ ಯುವಶಕ್ತಿ ಹಾಗೂ ನಮ್ಮ ಮಹನೀಯರ ಆದರ್ಶಗಳಿಂದ ಪ್ರೇರಣೆ ಪಡೆದು ಹೊಸ ಭಾರತವನ್ನು, ಬಲಿಷ್ಠ ಕರ್ನಾಟಕವನ್ನು ನಿರ್ಮಿಸೋಣವೆಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸಿದ್ದರು. ವೇದಿಕೆಯ ಮೇಲೆ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಸನಗೌಡ ಯಡಿಯಾಪೂರ, ಮಲ್ಲಿಕಾರ್ಜುನ ಹಿಪ್ಪರಗಿ ಮೊದಲಾದವರು ಉಪಸ್ಥಿತರಿದ್ದರು.
ಭಗತ್‌ಸಿಂಗ್ ಯುವಕ ಮಂಡಳಿ ವತಿಯಿಂದ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಸನ್ಮಾನಿಸಿ ಗೌರವಿಸಿದರು.
ಇತ್ತೀಚಗೆ ಮುದ್ದೇಬಿಹಾಳದಲ್ಲಿ ಸ್ವಯಂ ಘೋಷಿತ ರೈತ ನಾಯಕ ನಾನು ರೈತರಿಗಾಗಿ ಪ್ರಾಣವನ್ನೇ ಕೊಡುತ್ತೇನೆ, ರಕ್ತವನ್ನೇ ಕೊಡುತ್ತೇನೆಂದು ಹೇಳುತ್ತಿದ್ದಾನೆ ಇವನೇನು ಹನುಮಂತನಾ? ಎದೆ ಬಗೆದು ತೋರಿಸಲಿಕ್ಕೆ ಎಂದು ಹೆಸರು ಹೇಳದ ನಡಹಳ್ಳಿ ವಿರೂದ್ದ ವೆಂಗ್ಯದೊಂದಿಗೆ ಪ್ರಶ್ನೀಸಿದ ಯತ್ನಾಳ ಇಂತವರ ರಾಜಕೀಯ ಅಂತ್ಯ ಬಂದಿದ್ದಾಗಿದೆ ಅದಕ್ಕಾಗಿ ಆರ್.ಎಸ್.ಪಾಟೀಲ(ಕೂಚಬಾಳ), ಪ್ರಭು ದೇಸಾಯಿ ಎರಡು ಹುಲಿಗಳನ್ನು ಕ್ಷೇತ್ರದಲ್ಲಿ ಬಿಟ್ಟಿದ್ದೇನೆ ಇವರ ಜೊತೆ ಎಲ್ಲರೂ ನಿಲ್ಲಿ ಜನರಿಗಾಗಿ ನಿಜವಾಗಿ ಕೆಲಸ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸುವ ಕಾರ್ಯ ಮುಂದೆ ಆಗಲಿದೆ.
ಬಸನಗೌಡ ಪಾಟೀಲ(ಯತ್ನಾಳ) ವಿಜಯಪುರ ನಗರ ಶಾಸಕ