ತಾಳಿಕೋಟೆ, ಪಟ್ಟಣದ ಸಕಲ ಜನರ ಆರಾಧ್ಯ ದೇವತೆ ಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರರಂದು ಶ್ರೀ ದ್ಯಾಮವ್ವದೇವಿಯ ಮಹಾ ಮೂರ್ತಿಯನ್ನು ರಥದಲ್ಲಿ ಕೂಡ್ರಿಸಿದ ನಂತರ ಭವ್ಯ ಮೆರವಣಿಗೆಗೆ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಿದರು.
ಬೆಳಿಗ್ಗೆ ೮-೩೦ ಗಂಟೆಗೆ ಪಟ್ಟಣದ ಪ್ರಾರಂಭಗೊಂಡ ಶ್ರೀದೇವಿಯ ಮೆರವಣಿಗೆಯು ಕತ್ರಿಬಜಾರ, ಪಿಕೆಪಿಎಸ್ ಬ್ಯಾಂಕ್ ರಸ್ತೆ, ಪಂಚಸೈಯದ ದರ್ಗಾದ ಮುಂದಿನ ರಸ್ತೆಯ ಮೂಲಕ ರಾಜವಾಡೆಯಲ್ಲಿ ನಿರ್ಮಿಸಲಾಗಿರುವ ಪಾದಗಟ್ಟೆಗೆ ಸಾಯಂಕಾಲ ಬಂದು ತಲುಪಿತು. ನಂತರ ಶ್ರೀದೇವಿಯನ್ನು ಪಾದಗಟ್ಟೆಯಲ್ಲಿ ಕೂಡ್ರಿಸಿ ವಿವಿಧ ಪೂಜಾ ವಿದಾನಗಳನ್ನು ಸಲ್ಲಿಸಲಾಯಿತ್ತಲ್ಲದೇ ಭಕ್ತರು ತಮ್ಮ ಬೇಕು ಬೇಡಿಕೆಗಳ ಇಡೇರಿಕೆಗಾಗಿ ದೀಡ ನಮಸ್ಕಾರಗಳನ್ನು ಹಾಕಿ ಹರಕೆ ತೀರಿಸಿದರು. ನಂತರ ಭಕ್ತರು ಶ್ರೀದೇವಿಗೆ ಉಡಿ ತುಂಬಿ ತಮ್ಮ ಭಕ್ತಭಾವವನ್ನು ಮೇರೆದರು.
ಮೆರಗು ತಂದ ಕಲಾ ತಂಡಗಳು
ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರಾ ಉತ್ಸವದ ಭವ್ಯ ಮೆರವಣಿಗೆಯುದ್ದಕ್ಕೂ ರಾಜವಾಡೆಯ ಶ್ರೀದೇವಿ ಕೋಲಾಟ ಸಂಘದಿಂದ ವಿವಿಧ ಗೀತೆಗಳಿಗೆ ತಕ್ಕಂತೆ ಹೆಜ್ಜೆಹಾಕುವದರೊಂದಿಗೆ ಕೋಲಾಟ ನೃತ್ಯಮಾಡಿದರು. ಭಂಟವಾಳದ ಚಿಲಿಪಿಲಿ ಗೊಂಬೆ ಕುಣಿತ, ಮಹಿಷಾಸುರ ಮರ್ದಿನಿ ಚಂಡಿ ಮೇಳ, ಕರಡಿ ಮಜಲು, ಶೋಭಾ ಜೋಗತಿ ತಂಡದವರಿಂದ ಜೋಗತಿ ಕುಣಿತ, ಜೈ ಹನುಮಾನ ಸಾಂಬಳ ಕರಡಿ ಮಜಲು, ಸೋಲ್ಲಾಪೂರದ ನಾಶಿಕ ಡೋಲ ಕಲಾ ತಂಡಗಳು, ಆನಂದಪ್ಪ ಕೇತ್ರಿಯವರಿಂದ ಸಿಡಿ ಮದ್ದು, ಶಹನಾಯಿ ಮಜಲು ಒಳಗೊಂಡಂತೆ ಅನೇಕ ನೃತ್ಯತಂಡಗಳು ಭಾಗವಹಿಸಿ ಮೇರವಣಿಗೆಗೆ ಶೋಭೆ ತಂದುಕೊಟ್ಟವು.
ಪಟಾಕ್ಷೀ ಸಂಭ್ರಮ
ಶ್ರೀ ಗ್ರಾಮದೇವತೆಯ ಜಾತ್ರೋತ್ಸವ ಅಂಗವಾಗಿ ಶ್ರೀ ದೇವಿಯ ಮಹಾ ಮೂರ್ತಿಯ ಮೆರವಣಿಗೆಯ ಸಮಯದಲ್ಲಿ ವಿವಿಧ ನಮೂನೆಯ ಪಟಾಕ್ಷೀಗಳನ್ನು ಸಿಡಿಸಿ ಭಕ್ತಾದಿಗಳು ಸಂಭ್ರಮಿಸಿದರು.
ಜಾತ್ರೋತ್ಸವಕ್ಕೆ ಮಹಿಳೆಯರ ದಂಡು
ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ಗ್ರಾಮದೇವತೆ ಹಾಗೂ ಪ್ರತಿವರ್ಷ ಜರುಗುವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವವು ಒಟ್ಟಿಗೆ ಕೂಡಿಬಂದಿರುವದರಿಂದ ಮೇರವಣಿಗೆಯಲ್ಲಿ ಪುರುಷರಕ್ಕಿಂತಲೂ ಮಹಿಳೆಯರೇ ಹೆಚ್ಚಿಗೆ ಪಾಲ್ಗೊಂಡಿದ್ದು ಕಂಡುಬಂದಿತು.
ಬೆಳಿಗ್ಗೆಯಿಂದ ತುಂತುರು ಮಳೆ
ಮಳೆ ಆರಂಭದ ಜೂನ್ ತಿಂಗಳು ಮುಗಿದ ಜೂಲೈ ತಿಂಗಳು ಆರಂಭವಾದರೆ ಇಲ್ಲಿಯವರೆಗೆ ಮಳೆಯಾಗಿರಲಿಲ್ಲಾ ಆದರೆ ಜಾತ್ರೋತ್ಸವದ ಮುನ್ನಾದಿನ ಗುರುವಾರ ಸಾಯಂಕಾಲ ೬ ಗಂಟೆಗೆ ರಬಸದಿಂದ ಕೂಡಿದ ಮಳೆ ಸುರಿಯಿತ್ತಲ್ಲದೇ ಶುಕ್ರವಾರರಂದು ಬೆಳಿಗ್ಗೆಯಿಂದಲೇ ತುಂತುರು ಮಳೆಯು ಆಗ್ಗಾಗ್ಗೆ ಬರುತ್ತಿರುವದು ಕಂಡುಬಂದಿತು ಮಳೆಯಿಂದ ಮುಗಿಲ್ಲೆತ್ತರ ಮುಖಮಾಡಿದ ರೈತಾಪಿಜನತೆಗೆ ಶ್ರೀ ದ್ಯಾಮವ್ವದೇವಿಗೆ ರೈತರ ಕಷ್ಟಕ್ಕೆ ಸ್ಪಂದಿಸಿದ್ದಾಳೆಂಬ ಮಾತುಗಳು ಕಂಡುಬಂದವಲ್ಲದೇ ರಥೋತ್ಸವದ ವೇಳೆ ಇಡೀ ದಿನ ಮಳೆಯಲ್ಲಿಯೇ ನೆನೆದು ರಾಜವಾಡೆಯಲ್ಲಿಯ ಶ್ರೀದೇವಿಯು ಪಾದಗಟ್ಟೆಯವರೆಗೆ ಮುಟ್ಟುವವರೆಗೂ ಜನರು ನಿಂತುಕೊಂಡು ಮೇರವಣಿಗೆಗೆ ಸಾಕ್ಷೀಕರಿಸಿದರು.
ಭಕ್ತರಿಂದ ಮಹಾಪ್ರಸಾದ ವ್ಯವಸ್ಥೆ
ಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರೋತ್ಸವ ಅಂಗವಾಗಿ ನಡೆದ ಮೇರವಣಿಗೆಯ ದಾರಿಯುದ್ದಕ್ಕೂ ಅನೇಕ ಭಕ್ತ ವೃಂದದವರು ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರೆ ಇನ್ನೂ ಕೆಲವು ಭಕ್ತರು ತಂಪು ಪಾನಿಯಾ ಅಲ್ಲದೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಭಕ್ತಯನ್ನು ಸಮರ್ಪಿಸಿದರು.
ದಿ.೧೭ ಶುಕ್ರವಾರರಂದು ಪ್ರಾರಂಭಗೊಂಡಿರುವ ಶ್ರೀ ಗ್ರಾಮದೇವತೆಯ ಜಾತ್ರೋತ್ಸವವು ದಿ.೨೧ ರಂದು ಮಂಗಲಗೊಳ್ಳಲಿದ್ದು ೫ ದಿನಗಳ ಕಾಲ ಗೀಗಿಪದ ಒಳಗೊಂಡು ಬೈಲಾಟ, ದೇಶಿಯ ಆಟಗಳು ಒಳಗೊಂಡು ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ.
ಜಾತ್ರೋತ್ಸವ ಅಂಗವಾಗಿ ನಡೆದ ಮೇರವಣಿಗೆಯಲ್ಲಿ ಯಾವುದೇ ತರಹದ ಅಹೀತಕರ ಘಟನೆ ಜರುಗದಂತೆ ಸಿಪಿಐ ಮಹ್ಮದಪಸೀಉದ್ದೀನ, ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್, ಅಪರಾಧ ವಿಭಾಗ ಪಿಎಸ್‌ಐ ಎಸ್.ಎಂ.ಪಡಶೆಟ್ಟಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಡಿಆರ್ ತುಕಡಿ ಅಲ್ಲದೇ ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳೊಂದಿಗೆ ಯೋಗ್ಯ ಬಂದೋಬಸ್ತ ಕೈಗೊಂಡಿದ್ದರು.
ಜಾತ್ರೋತ್ಸವ ಅಂಗವಾಗಿ ಪ್ರತಿದಿನ ರಾಜವಾಡೆಯಲ್ಲಿ ಮಹಾ ಪ್ರಸಾದ ಅನ್ನ ಸಂತರ್ಪಣೆ ನಡೆಯಲಿದ್ದು ಕಾರಣ ತಾಳಿಕೋಟೆ ನಗರದ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕಮಿಟಿ ತಿಳಿಸಿದೆ.