ಬಳ್ಳಾರಿ, ಸೆ.04: ಆಧುನಿಕತೆಯ ಅಬ್ಬರ ಹಾಗೂ ಮೊಬೈಲ್ ಹಾವಳಿಯ ನಡುವೆಯೂ ವಿದ್ಯಾರ್ಥಿ ಮತ್ತು ಯುವಜನರಲ್ಲಿ ನಾಡಿನ ಜಾನಪದ ಕಲೆ, ಸಂಸ್ಕೃತಿಯ ಬಗ್ಗೆ ಒಲವು ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಶ್ರೀ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ್ ಎ. ಹಿರೇಮಠ ಹರ್ಷ ವ್ಯಕ್ತಪಡಿಸಿದರು.
ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಾಗೂ ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಉತ್ಸಾಹ ತೋರುತ್ತಿರುವುದು ಸಂತಸದ ಸಂಗತಿ. ನಾಡಿನ ಕಾಲೇಜುಗಳಲ್ಲಿ ಜಾನಪದ ಜಾತ್ರೆ, ಹಬ್ಬ ಹಾಗೂ ಯುವಜನೋತ್ಸವಗಳು ಜನಪ್ರಿಯಗೊಳ್ಳುತ್ತಿರುವುದು ಸಂಸ್ಕೃತಿಯ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸಾಹಿತ್ಯ, ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಪರಿಚಯ ಹಾಗೂ ಭಾಗವಹಿಸುವಿಕೆ ಅತ್ಯಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಡಿಡಿಪಿಐ ಹಾಗೂ ಸಾಹಿತಿ ಮಲ್ಲಿಕಾರ್ಜುನಸ್ವಾಮಿ ಹಿರೇಮಠ (ಮಹಿಮ) ಮಾತನಾಡಿ, ನಾಡೋಜ ಬುರ್ರಕಥಾ ಈರಮ್ಮ ಅವರು ಜ್ಞಾನದ ಗಣಿಯಾಗಿದ್ದರು. ಅವರು ಕನ್ನಡ ನಾಡಿನ ಹೆಮ್ಮೆ ಎಂದು ಕೊಂಡಾಡಿದರು. ವಿದ್ಯಾರ್ಥಿ-ಯುವಜನರು ಸದಾ ಲವಲವಿಕೆಯಿಂದ ಇರಬೇಕು. ಕಳೆದ ಕಹಿ ಘಟನೆಗಳನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಅವುಗಳಿಂದ ಕಲಿತ ಪಾಠ ಮತ್ತು ಅನುಭವದ ಮೂಲಕ ವರ್ತಮಾನವನ್ನು ಸಂತೋಷದಿಂದ ಕಳೆಯಬಹುದು ಎಂದರು.
ತಹಶೀಲ್ದಾರ್ ವಿನಾಯಕ ಗೋಡಬೋಲೆ ಮಾತನಾಡಿ, ಜಾನಪದವು ಬಾಯಿಂದ ಬಾಯಿಗೆ ಹರಿದುಬಂದ ಪ್ರಾಚೀನ ಕಲೆ ಮತ್ತು ಸಂಪ್ರದಾಯ ಮಾತ್ರವಲ್ಲ; ಅದು ಜ್ಞಾನಪದವೂ ಹೌದು. ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
‘ಬಳ್ಳಾರಿ ಜಿಲ್ಲೆಯ ಜಾನಪದ ಪರಂಪರೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಜಾನಪದ ಗಾಯಕ ಹಾಗೂ ಸಂಘಟಕ ಎಸ್.ಎಂ. ಹುಲುಗಪ್ಪ, ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಬಳ್ಳಾರಿ ಜಿಲ್ಲೆ ಶ್ರೀಮಂತ ಜಾನಪದ ಪರಂಪರೆ, ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ ಎಂದರು. ಜಾನಪದ ವಿದ್ವಾಂಸರಾದ ನಾಡೋಜ ಮುದೇನೂರು ಸಂಗಣ್ಣ, ಡಾ. ಮಲಶೆಟ್ಟಿ ಹಾಗೂ ಜಾನಪದ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ಬುರ್ರಕಥಾ ಈರಮ್ಮ, ನಾಡೋಜ ಕಪ್ಪಗಲ್ಲು ಪದ್ಮಮ್ಮ ಮತ್ತಿತರರು ಜಿಲ್ಲೆಯ ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶ್ಲಾಘಿಸಿದರು. ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಜಾನಪದವೇ ತಾಯಿಬೇರು ಎಂದು ಹೇಳಿದರು.
ಕಾಲೇಜಿನ 2026-27ನೇ ಸಾಲಿನ ಬಿ.ಇಡಿ. ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿ ಒಕ್ಕೂಟ ರಚನೆಯ ಫಲಕವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಸಿ. ಮಂಜುನಾಥ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ತರಗತಿಯಲ್ಲಿ ಉತ್ತಮವಾಗಿ ಕಲಿತಾಗ ಮಾತ್ರ ಭವಿಷ್ಯದಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯ ಸಮಾನ ಮನಸ್ಕ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಪ್ರಶಿಕ್ಷಣಾರ್ಥಿಗಳ ಮನೋವಿಕಾಸಕ್ಕಾಗಿ ಹಂತ ಹಂತವಾಗಿ ತಜ್ಞರಿಂದ ವಿಶೇಷ ಉಪನ್ಯಾಸ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಲು ಪರಿಷತ್ತು ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೌಸಿಯಾ ಎಜ್ಯುಕೇಷನ್ ಮೈನಾರಿಟೀಸ್ ಸೊಸೈಟಿಯ ಕಾರ್ಯದರ್ಶಿ ತಾಜುದ್ದೀನ್ ಪಿ. ಮಾತನಾಡಿದರು. ಸೊಸೈಟಿಯ ಅಧ್ಯಕ್ಷೆ ಆಲ್ಮಸ್ ತಬಸಮ್, ಆಡಳಿತಾಧಿಕಾರಿ ಹಫೀಜಾ ಬೇಗಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಹೆಸರಾಂತ ಜಾನಪದ ಗಾಯಕ ಎಸ್.ಎಂ. ಹುಲುಗಪ್ಪ ಮತ್ತು ತಂಡ ಹಾಗೂ ಪ್ರಶಿಕ್ಷಣಾರ್ಥಿಗಳಿಂದ ಜಾನಪದ ಗಾಯನ, ಜಾನಪದ ನೃತ್ಯ ಮತ್ತು ಸಮೂಹ ಗಾಯನ ನಡೆಯಿತು. ಕಲಾ ಪ್ರದರ್ಶನಗಳು ಸಭಿಕರು ಹಾಗೂ ಗಣ್ಯರ ಗಮನ ಸೆಳೆದವು.
ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಅಶ್ವರಾಮು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಮಂಜುನಾಥ ಮತ್ತು ಕವಿತಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಅಂಥೋನಿ. ಐ. ವಂದಿಸಿದರು. ವಿದ್ಯಾರ್ಥಿನಿ ದೀಪಿಕಾ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ದೊಡ್ಡಬಸಪ್ಪ, ಹಂಪಮ್ಮ ಹಾಗೂ ಉಪನ್ಯಾಸಕಿ ನಾಗವೇಣಿ ಕಾರ್ಯಕ್ರಮ ನಿರ್ವಹಿಸಿದರು.