ಧಾರವಾಡ,,16 : ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) 7ನೇ ಘಟಿಕೋತ್ಸವವು ಜುಲೈ 18, 2026 ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ಪ್ರೋ, ವೆಂಕಪ್ಪಯ್ಯ ಆರ್. ದೇಸಾಯಿ ಅವರು ಹೇಳಿದರು.
ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆಯ 7ನೇ ಘಟಿಕೋತ್ಸವದ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ರಾಷ್ಟ್ರೀಯ ವಿಜ್ಞಾನ ಪೀಠಾಚಾರ್ಯ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಏವಂ ಮಾನ್ವಿತ ವಿದ್ಯುತ್ ಅಭಿಯಾಂತ್ರಿಕೀ ಪ್ರಾಧ್ಯಾಪಕರಾದ ಪ್ರಾ. ಭೀಮ್ ಸಿಂಗ್ ಹಾಗೂ ಗೌರವ ಅತಿಥಿಗಳಾಗಿ ಬೆಂಗಳೂರು ಟಾಟಾ ಪವರ್ ರಿನೀವೆಬಲ್ ಮೈಕ್ರೋಗ್ರೀಡ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಗುಪ್ತಾ ಮತ್ತು ಭಾರತ ಪ್ಯಾನ್ ಐಐಟಿ ಪೂರ್ವ ಛಾತ್ರಾಗಣದ ಅಧ್ಯಕ್ಷ ಪ್ರಭಾತ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಘಟಿಕೋತ್ಸವದ ಅಧ್ಯಕ್ಷತೆಯನ್ನು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಶರದ್ ಕುಮಾರ್ ಸರಾಫ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವರು.
ಧಾರವಾಡ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) 7ನೇ ಘಟಿಕೋತ್ಸವದ ಅಂಗವಾಗಿ ಸಂಸ್ಥೆಯ ಶೈಕ್ಷಣಿಕ ಸಾಧನೆ, ಸಂಶೋಧನೆ, ವಿದ್ಯಾರ್ಥಿ ಕಲ್ಯಾಣ, ಮೂಲಸೌಕರ್ಯ ಹಾಗೂ ಆಡಳಿತ ಕ್ಷೇತ್ರದ ಪ್ರಮುಖ ಸಾಧನೆಗಳ ಬಗ್ಗೆ ಅವರು ಹೇಳಿದರು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಸಮಾಜ ಸೇವಕಿ, ಪದ್ಮ ಭೂಷಣ ವಿಜೇತೆ, ಲೇಖಕಿ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು. ರಾಷ್ಟ್ರಪತಿ ಭವನ ಹಾಗೂ ಕೇಂದ್ರ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮತಿ ಲಭಿಸಿದೆ. ಈ ಗೌರವವು ಧಾರವಾಡಕ್ಕೆ ಮಹತ್ವದ ಹೆಗ್ಗುರುತಾಗಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಲಿದೆ. ಸುಧಾ ಮೂರ್ತಿ ಅವರ ಸಾಧನೆಗಳು ಹಾಗೂ ಸಮಾಜಮುಖಿ ಸೇವೆಗಳು ಹೆಚ್ಚಿನ ಜನರಿಗೆ ತಲುಪಲಿವೆ ಎಂದು ಅವರು ಹೇಳಿದರು.
ಘಟಿಕೋತ್ಸವದಲ್ಲಿ 2 ಚಿನ್ನದ ಪದಕ, 10 ಬೆಳ್ಳಿ ಪದಕಗಳು ಸೇರಿ 1 ಅತ್ಯುತ್ತಮ ವಿದ್ಯಾರ್ಥಿಗೆ ಓಮ್ ಪ್ರಕಾಶ ಗೊಯಲ್ ಆ್ಯಂಡ್ ಸೇವತಿ ದೇವಿ ಗೊಯಲ್ ಪ್ರಶಸ್ತಿ ವಿತರಿಸಲಾಗುವುದು.
ಸಂಶೋಧನಾ ಕ್ಷೇತ್ರದಲ್ಲಿ ಗ್ರಾಮೀಣ ಜೀವನೋಪಾಯ ಮತ್ತು ಅಭಿವೃದ್ಧಿ ಕೇಂದ್ರ (CoE-RLD) ಸ್ಥಾಪನೆಗೆ ರೂ. 15 ಕೋಟಿ ಮೌಲ್ಯದ ಯೋಜನೆ ಶಿಫಾರಸು ಮಾಡಲಾಗಿದೆ. ಪ್ರಧಾನಮಂತ್ರಿ ವಿಕಾಸ್ ಯೋಜನೆಯಡಿ ರೂ. 13.75 ಕೋಟಿ ಅನುದಾನ ದೊರೆತಿದ್ದು, ಕರ್ನಾಟಕ ಸರ್ಕಾರದ ಶಾಲೆಗಳಿಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೆ ರೂ.15 ಕೋಟಿ ಅನುದಾನ ಮಂಜೂರಾಗಿದೆ. ಮಹಿಳಾ ಸಬಲೀಕರಣ, ಸುಸ್ಥಿರ ತಂತ್ರಜ್ಞಾನ, ಗಾಳಿ ಶಕ್ತಿ ಹಾಗೂ ಅಪರೂಪದ ಭೂಮಿಯ ಲೋಹಗಳ ಸಂಶೋಧನೆಗೆ ಹಲವು ಯೋಜನೆಗಳಿಗೆ ಹೆಚ್ಚುವರಿ ಅನುದಾನವೂ ದೊರೆತಿದೆ ಎಂದು ಅವರು ಹೇಳಿದರು.
ಧಾರವಾಡ ರಿಸರ್ಚ್ ಆ್ಯಂಡ್ ಟೆಕ್ನಾಲಜಿ ಇನ್‍ಕ್ಯುಬೇಟರ್ (ಧರ್ತಿ) ಫೌಂಡೇಶನ್ ಮೂಲಕ 20ಕ್ಕೂ ಹೆಚ್ಚು ಸ್ಟಾರ್ಟ್ ಆ್ಯಪ್‍ಗಳಿಗೆ ಬೆಂಬಲ ನೀಡಲಾಗುತ್ತಿದ್ದು, 25 ಸಹಭಾಗಿತ್ವದ ಸ್ಟಾರ್ಟ್ ಆ್ಯಪ್‍ಗಳಿಗೆ ಉತ್ತೇಜನ ನೀಡಲಾಗಿದೆ.
ಬೋಧಕರ ಕಲ್ಯಾಣಕ್ಕಾಗಿ ಹೊಸ ಸಂಶೋಧನಾ ಅನುದಾನ, ಆಧುನಿಕ ವಸತಿ, ಡೇ ಕೇರ್, ವೆಲ್‍ನೆಸ್ ಕೇಂದ್ರ, ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಐಐಎಸ್‍ಸಿ, ಇಸ್ರೋ, ಎನ್‍ಆರ್‍ಎಸ್‍ಸಿ ಸೇರಿದಂತೆ ಹಲವು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಲಾಯಿತು.
ಹಸಿರು ಕ್ಯಾಂಪಸ್ ಪರಿಕಲ್ಪನೆಯಡಿ 470 ಎಕರೆ ವಿಸ್ತೀರ್ಣದ ಕ್ಯಾಂಪಸ್‍ನಲ್ಲಿ ಮಳೆನೀರು ಸಂಗ್ರಹ, 1.8 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ, ತ್ಯಾಜ್ಯ ನೀರಿನ ಮರುಬಳಕೆ, ಭೂಗರ್ಭ ಜಲ ಮರುಪೂರಣ ಹಾಗೂ ಪರಿಸರ ಸ್ನೇಹಿ ಕಟ್ಟಡ ವಿನ್ಯಾಸಗಳನ್ನು ಅಳವಡಿಸಲಾಗಿದೆ. 2030 ರೊಳಗೆ ನೀರು, ಇಂಧನ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ನೆಟ್–ಜೀರೋ ಗುರಿ ಸಾಧಿಸಲು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ (NIRF)–2025ರಲ್ಲಿ ಐಐಟಿ ಧಾರವಾಡ ದೇಶದ ಎಂಜಿನಿಯರಿಂಗ್ ಸಂಸ್ಥೆಗಳ ಪೈಕಿ 77 ನೇ ಸ್ಥಾನ ಪಡೆದಿದ್ದು, ಮುಂದಿನ ವರ್ಷಗಳಲ್ಲಿ 50 ರೊಳಗೆ ಸ್ಥಾನ ಪಡೆಯುವ ಗುರಿ ಹೊಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ವಿಭಾಗದ ಡೀನ್ ಪ್ರೋ.ದಿಲೀಪ್ ಎ.ಡಿ., ಬೋಧಕ ವರ್ಗ ಕಲ್ಯಾಣ ವಿಭಾಗದ ಡೀನ್ ಪ್ರೋ. ರಂಜೀ ರೇಪಕ, ಶೈಕ್ಷಣಿಕ ಕಾರ್ಯಕ್ರಮಗಳ ಡೀನ್ ಪ್ರೋ. ನವೀನ್ ಎಂ.ಬಿ., ಮೂಲ ಸೌಕರ್ಯ, ಯೋಜನೆ ಮತ್ತು ಬೆಂಬಲ ವಿಭಾಗದ ಡೀನ್ ಪ್ರೋ. ಅಮರನಾಥ್ ಹೆಗಡೆ, ಪ್ರೋ. ಪ್ರತ್ಯಾಸ ಭುಯಿ, ಹೊರವಲಯ, ಹಳೆಯ ವಿದ್ಯಾರ್ಥಿಗಳು ಮತ್ತು ಕಾಪೋರೇಟ್ ಸಂಬಂಧಗಳ ಡೀನ್ ಪ್ರೋ. ಧೀರಜ್ ವಿ. ಪಾಟೀಲ್, ಆರ್ & ಡಿ ವಿಭಾಗದ ಡೀನ್ ಪ್ರೋ. ಕೋಟೇಶ್ವರರಾವ್ ಕೊಣ್ಡೇಪು, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೋ. ಆರ್. ಪ್ರಭು, SWL - ಕ್ಷೇಮ ವಿಭಾಗದ ಡೀನ್ ಪ್ರೋ. ರಿಧಿಮಾ ತಿವಾರಿ ದೇಸಾಯಿ, ಕುಲಸಚಿವರಾದ ಡಾ. ಕಲ್ಯಾಣ್ ಕುಮಾರ್ ಭಟ್ಟಾಚಾರ್ಜಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೋ. ವಿಜೇತ್ ಜೆ. ಕೊಟಗಿ ಉಪಸ್ಥಿತರಿದ್ದರು.