ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಹಸಿರು ಕ್ರಾಂತಿ ವರದಿ ದೇವರಹಿಪ್ಪರಗಿ
60ರ ದಶಕದಲ್ಲಿ ಉಳ್ಳವರಿಗೆ ಮಾತ್ರ ಪ್ರೌಢಶಿಕ್ಷಣ ಸಿಮೀತವಾಗಿದ್ದ ಕಾಲವದು. ಅಂತೂ ಕಲಿಯಲೇ ಬೇಕಾದರೆ ಜೀವ ಪಣಕ್ಕಿಟ್ಟು ಡೋಣಿ ನದಿ ದಾಟಿ ಕಲಿಯುವ ಸಾಹಕ್ಕೆ ಕೈ ಹಾಕಬೇಕಾಗಿತ್ತು. ಇವೆಲ್ಲವಕ್ಕೂ ಒಂದೇ ಪರಿಹಾರ ಅಸ್ತ್ರವಾಗಿ ಹಾಗೂ ಹಲವು ದಶಕಗಳ ಸಂಕಷ್ಟಗಳ ಮುಕ್ತಿಗಾಗಿ ಆರಂಭಿಸಿದ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಗೆ ಸುವರ್ಣ ಮಹೋತ್ಸವದ ಸಂಭ್ರಮವಿದ್ದು, ಸರಸ್ವತಿಯ ನೈಜ ಆರಾಧನೆಯ ಸಾರ್ಥಕತೆಗೆ ಹಿಡಿದ ಕೈಗನ್ನಡಿಯಾಗಿದೆ.
5 ದಶಕಗಳಿಂದ ಅರಿವಿನ ಜ್ಯೋತಿಯಾಗಿ ಬೆಳಗುತ್ತ ತಾಲೂಕಿನ ಯಾಳವಾರ ಗ್ರಾಮದ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ಷೇತ್ರಕ್ಕೆ ಅನುಪಮ ಕೊಡುಗೆ ಸಲ್ಲಿಸಿರುವ ಪ್ರೌಢಶಾಲೆ ಅರ್ಧ ಶತಮಾನದ ಮೈಲಿಗಲ್ಲನ್ನು ಯಶಸ್ವಿಯಾಗಿ ತಲುಪಿದ ಸಂಭ್ರಮದಲ್ಲಿ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಶಾಲೆಯ ಸಮಾರಂಭವನ್ನು ಇದೇ ಜುಲೈ-5ರಂದು ರವಿವಾರ ಅದ್ದೂರಿಯಾಗಿ ಸುವರ್ಣ ಮಹೋತ್ಸವ ಸಮಾರಂಭ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಮುಖ್ಯೋಪಾಧ್ಯಾಯ ಬಿ.ಎಸ್.ಮಡಿಕೇಶ್ವರ ನೇತೃತ್ವದಲ್ಲಿ 8ನೇ ತರಗತಿ ಆರಂಭ:
ಗ್ರಾಮದ ಮಕ್ಕಳು ಡೋಣಿ ನದಿ ದಾಟಿ ಹೋಗಿ ತಾಳಿಕೋಟೆ ಹಾಗೂ ವಿಜಯಪುರಕ್ಕೆಹೋಗಿ ಬಡವರು ಹಾಗೂ ಬಾಲಕಿಯರು ಶಾಲೆ ಕಲಿಯಲು ಪರದಾಡುವ ಸ್ಥಿತಿ ಒಂದಡೆಯಾದರೇ, 8, 9,10ನೇ ತರಗತಿ ಕಲಿಯಲು ಬೇರೆ ತಾಲೂಕು ಹಾಗೂ ಜಿಲ್ಲೆಗೆ ಹೋಗಲು ಸಾಧ್ಯವಾಗಿರುವುದು ಶ್ರೀಮಂತರ ಮಕ್ಕಳಿಗೆ ಮಾತ್ರ ಎನ್ನುವುದು ಶಿಕ್ಷಣ ಉಳ್ಳವರಿಗೆ ಮಾತ್ರ ಎನ್ನವಂತಾಗಿತ್ತು. ಇದನ್ನೆಲ್ಲವನ್ನು ಮನಗಂಡು ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ 1967ರಲ್ಲಿ ಗ್ರಾಮದ ಪ್ರಮುಖರುಗಳಾದ ಸಿದ್ದನಗೌಡ ನಾಡಗೌಡ್ರ, ಸೋಮನಗೌಡ ಹಿರೇಗೌಡ, ಬಸವಂತ್ರಾಯ ಮೂಲಿನಮನಿ, ರಾಹುಸಾಹೇಬಗೌಡ ಪಾಟೀಲ(ಉತ್ನಾಳ), ಮಲ್ಲನಗೌಡ ಮೂಲಿಮನಿ ಹಾಗೂ ಎಂ.ಆರ್.ಪಾಟೀಲ ಸೇರಿದಂತೆ ಹಲವಾರು ಮುಖಂಡರು ಒಂದಾಗಿ ಚರ್ಚಿಸಿ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದ ಪಕ್ಕದಲ್ಲಿರುವ 2 ಕೊಠಡಿಗಳಲ್ಲಿ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘ ಕಟ್ಟಿ ಪ್ರೌಢಶಾಲೆ ಆರಂಭಿಸಿದ ಸಂದರ್ಭದಲ್ಲಿ ಸುತ್ತ-ಮುತ್ತಲಿನ ಜಿಲ್ಲೆಗಳಲ್ಲಿ ಕೆಲವೇ ಕೆಲವು ಪ್ರೌಢಶಾಲೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಅಂದು ಮುಖ್ಯೋಪಾಧ್ಯಾಯ ಬಿ.ಎಸ್.ಮಡಿಕೇಶ್ವರ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದ ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ 8ನೇ ತರಗತಿ ಪ್ರಾರಂಭಿಸಲಾಯಿತು.
ಜಿಲ್ಲೆ ಅಂತರ್ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗಾಗಿ ಊಟ ವಸತಿ ಸೌಲಭ್ಯ ಕಲ್ಪಿಸಲು ಪ್ರತಿ ಮನೆ ಮನೆಗಳಿಂದ ವಿದ್ಯಾರ್ಥಿಗಳಿಗಾಗಿ ಊಟಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿತ್ತು. ಹೆಣ್ಣು ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದ್ದ 60 ದಶಕದಲ್ಲಿ ಪ್ರಮುಖರ ಕೋರಿಕೆಯಂತೆ ಬಾಲಕ, ಬಾಲಕಿಯರಿಗೆ ವಸತಿ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲು ನಿರ್ಧರಿಸಿ ಸಕಲ ವ್ಯವಸ್ಥೆ ಮಾಡಲಾಗಿತ್ತು. ಪರ ಊರಿನಿಂದ ಬಂದ ಬಾಲಕಿಯರಿಗೆ ಗ್ರಾಮದ ಪ್ರಮುಖರ ಮನೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು.
ಶಿಕ್ಷಣವೊಂದು ಉದ್ಯಮವಲ್ಲ, ಅದೊಂದು ಸುಶಿಕ್ಷಿತ ಸಮಾಜದ ಭದ್ರ ಅಡಿಪಾಯ ಎನ್ನುವುದನ್ನು ಸಾರಿ ಹೇಳಲಾಗಿತ್ತು. ಕೆಲವು ವರ್ಷಗಳಲ್ಲಿಯೇ ಸಂಸ್ಥೆ ಸುತ್ತಲಿನ ಜಿಲ್ಲೆ ಹಾಗೂ ತಾಲೂಕಿಗೆ ತನ್ನ ಉತ್ಕೃಷ್ಠ ಶಿಕ್ಷಣ ಕಂಪು ಹರಡಿದ್ದಲ್ಲದೇ 1971ರಲ್ಲಿ ಉಚಿತ ಪ್ರಸಾದ ನಿಲಯವನ್ನೂ ಸ್ಥಾಪಿಸಲಾಯಿತು. ಗ್ರಾಮೀಣ ಪ್ರದೇಶದ ಸಂಸ್ಥೆಯಲ್ಲಿ ಕಲೆತ ವಿದ್ಯಾರ್ಥಿಗಳು ಜಿಲ್ಲೆಗೆ ಸ್ಪರ್ಧಾತ್ಮಕವಾಗಿ ಶಿಕ್ಷಣ, ತರಬೇತಿ ಶಾಲೆಯಾಗಿ ಸ್ಪರ್ಧೆ ಒಡ್ಡುವ ಮೂಲಕ ಜಿಲ್ಲೆಗೆ ಮಾದರಿ ಪ್ರೌಢಶಾಲೆಯಾಗಿ ಹೆಸರುವಾಸಿಯಾಗಿತ್ತು. ಇದನ್ನು ಮನಗಂಡು ಪ್ರೌಢಶಾಲೆಗೆ ಸ್ವಂತ ಕಟ್ಟಡದ ಸಲುವಾಗಿ ಗ್ರಾಮದ ಪ್ರಮುಖರಾದ ಮಲ್ಲನಗೌಡ ಮೂಲಿಮನಿಯವರು ಪ್ರೌಢಶಾಲೆಗೆ ಭೂ ದಾನ ಮಾಡಿದರು. ನಂತರ ಕಡಕೋಳದ ಪ.ಪೂ ಮಹಾಲಿಂಗ ಸ್ವಾಮೀಜಿಗಳು ಶಾಲೆಯ ಉತ್ತಮ ಪರಿಸರ ಕಲ್ಪಿಸುವ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಭೂ ದಾನ ಮಾಡಿದ್ದರು. ಈ ಕ್ರೀಡಾಂಗಣಕ್ಕೆ ಮಹಾಲಿಂಗ ಸ್ವಾಮೀಜಿಯವರ ಹೆಸರನ್ನು ಇಡುವ ಮೂಲಕ ಶ್ರೀಗಳ ಹೆಸರನ್ನು ಶಾಶ್ವತವಾಗಿಸುವಂತೆ ಮಾಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಪ್ರತಿಭೆಗಳ ಅರಳಿಸಿದ ಸಂಸ್ಥೆ:
ಸುಮಾರು ದಶಕಗಳ ಕಾಲ ಸುತ್ತ-ಮುತ್ತಲಿನ ಭಾಗದ ಬಾಲಕ, ಬಾಲಕಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾದ ಸಂಸ್ಥೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣದ ಜೊತೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ. ಎನ್.ಸಿ.ಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಂತಹ ಸೇವಾ ಘಟಕಗಳನ್ನು ಪ್ರಾರಂಭಿಸಿ ಅನುಭವಿ ಶಿಕ್ಷಕರ ವರ್ಗದ ನಿರಂತರ ಪ್ರೋತ್ಸಾಹದಿಂದಾಗಿ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.
ಕಲಾ, ವಾಣಿಜ್ಯ ಪಪೂ ಪ್ರಾರಂಭಿಸಿದ ಸಂಗನಗೌಡ್ರು:
ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಹಲವರು ದೇಶ ವಿದೇಶಗಳಲ್ಲಿ ಖ್ಯಾತನಾಮರಾಗಿ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಕಲಿತ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಕಾಲೇಜಿನ ವ್ಯಾಸಂಗಕ್ಕೆ ತೆರಳಲು ಹೋಗದೇ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಆಗಿನ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಸಂಗನಗೌಡ ನಾಡಗೌಡ್ರು ಜನಪರ ಹತ್ತಾರು ಕೆಲಸ ಮಾಡುವ ಮೂಲಕ ಜನಸೇವಕಾಗಿ ಹೊರಹೊಮ್ಮಿದ್ದರು. ತಮ್ಮೂರಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಮಹಾದಾಸೆಯಿಂದ 2010-11ರಲ್ಲಿ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಪ್ರಾರಂಭಿಸಲು ಮುಂದಾಗಿ ಯಶಸ್ವಿಯಾದರು. ಈ ಮೂಲಕ ಸೋಮೇಶ್ವರ ಸಂಸ್ಥೆ ಕೇವಲ ಶಾಲೆಯಾಗಿ ಉಳಿಸದೇ ಈ ಊರಿನ ಜೀವನಾಡಿಯಾಗಿಸಿದರು.
ಸಕಲ ಸೌಲಭ್ಯ ಕಲ್ಪಿಸಿದ ರಾಜುಗೌಡರು:
ದೇವಸ್ಥಾನದ ಆವರಣದಲ್ಲಿ ಆರಂಭಗೊಂಡ ಶಾಲೆ ಶೈಕ್ಷಣಿಕ ಪ್ರಗತಿಯಲ್ಲಿ ಸದಾ ಮುಂದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅಕ್ಷರದ ಹಸಿವನ್ನು ಇಂಗಿಸಲು ಗ್ರಾಮದ ಪ್ರಮುಖರು ಟೊಂಕಕಟ್ಟಿ ನಿಲ್ಲುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ಪ್ರತಿಷ್ಠಿತ ಶಾಲೆಯನ್ನಾಗಿ ರೂಪಿಸಿದ್ದಾರೆ. ನಂತರ ಅವರ ಚಿರಂಜೀವಿಯಾದ ರಾಜುಗೌಡ ನಾಡಗೌಡರ ಅಧ್ಯಕ್ಷತೆಯಲ್ಲಿ ಶಾಲೆಗೆ ಬೇಕಾಗುವ ಸುಸಜ್ಜಿತವಾದ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ವಿಶಾಲ ಕ್ರೀಡಾಂಗಣ, ವರಾಂಡದ ಸುತ್ತ ವೈವಿಧ್ಯ ಸಸ್ಯಗಳಿಂದ ನಿರ್ಮಾಣವಾದ ಉದ್ಯಾನ, ಧ್ವಜಸ್ತಂಭ, ಹಸಿರು ಹುಲ್ಲು ಹಾಸು, ಪ್ರಯೋಗ ಶಾಲೆ, ಗ್ರಂಥಾಲಯ, ಗಣಕಯಂತ್ರ ಕೊಠಡಿ, ನುರಿತ ಶಿಕ್ಷಕ ವೃಂದ ನೂತನ ಶಾಲೆ ಕಟ್ಟಡಗಳ ನಿರ್ಮಾಣ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಬದುಕನ್ನು ಉಜ್ಜಲಗೊಳಿಸಲು ನೆರವಾಗಿದ್ದಾರೆ.
ಪ್ರೌಢಶಾಲೆಗೆ ಸುವರ್ಣ ಮಹೋತ್ಸವದ ಸಂಭ್ರಮ:
1967ರಲ್ಲಿ ಆರಂಭವಾದ ಈ ಶಾಲೆ 50 ವಸಂತಗಳನ್ನು ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ದಿವ್ಯ ಸಾನ್ನಿಧ್ಯವನ್ನು ಜಗದ್ಗುರುಗಳಾದ ರಂಭಾಪುರಿ ಶ್ರೀಗಳು, ಸ್ಥಳೀಯ ಮಠದ ಷ.ಬ್ರ ಶ್ರೀ ದಾರುಕಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಸುವರ್ಣ ಮಹೋತ್ಸವ ಸಮಾರಂಭ ಸಜ್ಜುಗೊಂಡಿದೆ.
ಕೇವಲ ಶಾಲೆಯಾಗಿ ಉಳಿಯದೆ ಈ ಊರಿನ ಜೀವನಾಡಿಯಾಗಿದೆ. ಎಲ್ಲರ ಸಹಭಾಗಿತ್ವದಲ್ಲಿ ಶ್ರೀ ಸೋಮೇಶ್ವರ ದೇವಸ್ಥಾನ ಚಾವಡಿಯಲ್ಲಿ ಆರಂಭಗೊಂಡ ಶಾಲೆ ಶೈಕ್ಷಣಿಕ ಪ್ರಗತಿಯಲ್ಲಿ ಸದಾ ಮುಂದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅಕ್ಷರದ ಹಸಿವನ್ನು ಇಂಗಿಸಲು ಊರಿನ ಜನತೆ ಟೊಂಕಕಟ್ಟಿ ನಿಲ್ಲುವ ಮೂಲಕ ಪ್ರತಿಷ್ಠಿತ ಶಾಲೆಯನ್ನಾಗಿ ರೂಪಿಸಿದ್ದಾರೆ. ಸ್ಥಳೀಯ ಸಮಾಜಮುಖಿ ಪ್ರಮುಖರ ಸಾರ್ಥಕತೆಯ ಪರಿಶ್ರಮದ ಫಲವಾಗಿ ಕಾರ್ಯಾರಂಭ ಮಾಡುವ ಮೂಲಕ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಬದುಕನ್ನು ಉಜ್ವಲ ಗೊಳಿಸಲು ನೇರವಾಗಿದೆ. ಈ ಶಾಲೆಯಲ್ಲಿ ಅಕ್ಷರ ಕಲಿತವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಮಾಜ ಸೇವೆ, ರಾಜಕೀಯ, ಕ್ರೀಡೆ, ಆಡಳಿತಾತ್ಮಕ, ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮ, ಸಾಹಿತ್ಯಿಕ,ದೇಶ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ, ವಿಶಾಲ ಕ್ರೀಡಾಂಗಣ, ಸುತ್ತ-ಮುತ್ತಲಿನ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ವಾಹನದ ಸೌಲಭ್ಯ ಹಾಗೂ ಕಡಿಮೆ ವೆಚ್ಚದ ಸರ್ಕಾರಿ ಫೀ ಪಡೆಯುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ನೀಡಲಾಗುತ್ತಿದೆ. ಶಾಲೆಯ ಸುವರ್ಣ ಮಹೋತ್ಸವ ಸವಿ ನೆನಪಿಗಾಗಿ ಸ್ಮರಣ ಸಂಚಿಕೆ ಹೊರ ತರಲು ತಯಾರಿ ನಡೆಯುತ್ತಿದ್ದು, ಇದಕ್ಕೆಲ್ಲ ಗ್ರಾಮಸ್ಥರ ಸಹಕಾರದಿಂದ ನಡೆಯುತ್ತಿದೆ.
ಸಂಸ್ಥೆ ಪ್ರಾರಂಭಿಸಲು ಸಹಾಯ ಮಾಡಿದವರು:
ಬಿ.ಎಸ್.ಮಡಿಕೇಶ್ವರ, ಸ್ಥಳೀಯ ಹಿರೇಮಠದ ಮಹಾಲಿಂಗೇಶ್ವರ ಸ್ವಾಮಿಗಳು, ಅಣ್ಣಸಾಹೇಬಗೌಡ ಮೂಲಿಮನಿ, ಸಿದ್ದನಗೌಡ ನಾಡಗೌಡ್ರ, ಸೋಮನಗೌಡ ಹಿರೇಗೌಡ, ಬಸವಂತ್ರಾಯಗೌಡ ಮೂಲಿಮನಿ, ಮಲ್ಲನಗೌಡ ಪಾಟೀಲ, ರಾವಸಾಬ ಉತ್ನಾಳ, ಸಂಗನಗೌಡ ನಾಡಗೌಡ್ರ, ಬಾಲಚಂದ್ರ ಕುಲಕರ್ಣಿ, ದತ್ತುಮಾಸ್ತಾರ ನಾಗರಾಳ, ಮಲ್ಲನಗೌಡ ಕರೆಕಲ್, ಬಸನಗೌಡ ಕೌಲಗಿ, ಡಾ.ಹಿರೇಗೌಡ, ಸುರೇಶಬಾಬು ನಾಡಗೌಡ ಹಾಗೂ ಸಂಸ್ಥೆಯ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಗಣ್ಯರು ಸಂಸ್ಥೆಗೆ ಸಹಾಯ ಸಹಕಾರ ನೀಡಿದ್ದಾರೆ.
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧರಿತ ಶಿಕ್ಷಣ ನೀಡುವ ಮೂಲಕ ಕಲಿಕೆಯಲ್ಲಿ ಹೊಸತನ, ಸಂಗೀತ ಶಿಕ್ಷಣ ಆತ್ಮಸ್ಥೈರ್ಯ, ಸ್ವಯಂ ರಕ್ಷಣೆಗೆ ಕರಾಟೆ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಪಾಲಿಗೆ ಬಹುಮಾನ ಗಿಟ್ಟಿಸುವಲ್ಲಿ ಸಫಲರಾಗುವಂತೆ ಮಾಡಿದೆ. ಸಂಸ್ಥೆಯ ನಿರ್ದೇಶಕರ ಮಂಡಳಿ, ಗ್ರಾಮದ ಪ್ರಮುಖರು ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಈ ಬಾರಿ ಜೂನ್ ತಿಂಗಳಲ್ಲಿ ಸುವರ್ಣ ಮಹೋತ್ಸವ ಸಮಾರಂಭ ಅದ್ಧೂರಿಯಾಗಿ ಆಚರಿಸಲು ಆಯೋಜಿಸಲಾಗಿದೆ.
-ರಾಜುಗೌಡ ನಾಡಗೌಡ್ರ, ಅಧ್ಯಕ್ಷರು, ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘ ಯಾಳವಾರ.
ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣದ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಉತ್ತೇಜನ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲೆ ದಾರಿದೀಪವಾಗಿದೆ. ಈ ಸಂಸ್ಥೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸುತ್ತದೆ. ಅನುಭವಿ ಶಿಕ್ಷಕ ವರ್ಗದ ನಿರಂತರ ಪ್ರೋತ್ಸಾಹದಿಂದಾಗಿ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
-ಹಳೆಯ ವಿದ್ಯಾರ್ಥಿ
