ಬಳ್ಳಾರಿ, ಆ.17: ತುಂಗಭದ್ರ ಜಲಾಶಯದಿಂದ HLC/LLC ಕಾಲುವೆಗಳಿಗೆ ಪ್ರಸ್ತುತ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ತಕ್ಷಣ ಹೆಚ್ಚಿಸಿ, ಕೊನೆಯ ಭಾಗದ ರೈತರ ಜಮೀನುಗಳಿಗೂ ಸಮರ್ಪಕವಾಗಿ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ ಆಗ್ರಹಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತುಂಗಭದ್ರ ಆಡಳಿತ ಮಂಡಳಿ, ತುಂಗಭದ್ರ ನೀರಾವರಿ ಸಲಹಾ ಮಂಡಳಿ ಅಧ್ಯಕ್ಷರು, ಬಳ್ಳಾರಿ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆ.11ರಿಂದ ತುಂಗಭದ್ರ ಜಲಾಶಯದಿಂದ HLC/LLC ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು, ಪ್ರಸ್ತುತ ಸುಮಾರು 3.5 ಅಡಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಆದರೆ ಬಳ್ಳಾರಿ ಜಿಲ್ಲೆಯ ರೈತರ ಜಮೀನುಗಳಿಗೆ ನೀರು ಪೂರೈಸುವ ಡಿಪಿಗಳು 4ರಿಂದ 5 ಅಡಿ ಎತ್ತರದಲ್ಲಿರುವುದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ಶೇ.50ರಷ್ಟು ಮಳೆಯ ಕೊರತೆಯಾಗಿದ್ದು, ಅನೇಕ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಹಿಂದಿನ ಹಿಂಗಾರು ಹಂಗಾಮಿನಲ್ಲಿಯೂ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ತುಂಗಭದ್ರ ನೀರಿನ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಎಕರೆ ಕೃಷಿಭೂಮಿಗೆ ಸಮರ್ಪಕ ನೀರು ಒದಗಿಸುವುದು ಅತ್ಯಗತ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪೂರ್ಣ ಪ್ರಮಾಣದ ನೀರಿಗೆ ಆಗ್ರಹ
ಆ.11ರಂದು ನಡೆದ ಐಸಿಸಿ ಸಭೆಯ ನಿರ್ಧಾರದಂತೆ ರೈತರಿಗೆ ದೊರೆಯಬೇಕಾದ ಪೂರ್ಣ ಪ್ರಮಾಣದ ನೀರನ್ನು RBLLC ಮುಖ್ಯ ಕಾಲುವೆಗೆ ತಕ್ಷಣ ಹರಿಸಿ, ಕೊನೆಯ ಭಾಗದ ಡಿಪಿಗಳಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
HLC ವಿತರಣಾ ಕಾಲುವೆ ಸಂಖ್ಯೆ 14ರ ವ್ಯಾಪ್ತಿಯ ಎಲ್ಲ ಉಪಕಾಲುವೆಗಳಿಗೆ ಸಮಾನವಾಗಿ ನೀರು ಹಂಚಿಕೆಯಾಗುವ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದಲ್ಲಿ ತಾತ್ಕಾಲಿಕವಾಗಿ ON/OFF ಗೇಟ್‌ಗಳನ್ನು ಅಳವಡಿಸಿ ನೀರಿನ ಸಮರ್ಪಕ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅದೇ ರೀತಿ ತುಂಗಭದ್ರ ಜಲಾಶಯದ ನದಿ ಹಾಗೂ ವೇದಾವತಿ ನದಿ ದಡದ ರೈತರು, ಜಾನುವಾರುಗಳು ಮತ್ತು ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನೂ ಖಚಿತಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
HLC/LLC ಹಾಗೂ ಹಗರಿ (ವೇದಾವತಿ) ಭಾಗದ ರೈತರಿಗೆ ಪೂರ್ಣ ಪ್ರಮಾಣದ ನೀರು ಹರಿಸಲು ಸರ್ಕಾರ ಮತ್ತು ತುಂಗಭದ್ರ ಮಂಡಳಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರ ಪರವಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದು
ಅನಿವಾರ್ಯವಾಗಲಿದೆ ಎಂದು ಎಸ್. ಗುರುಲಿಂಗನಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಚ್.ಆರ್. ಮಲ್ಲಿಗೌಡ, ಬೋಘರಾಜು, ಗಣಪಲ್ ಐನಾಥ್ ರೆಡ್ಡಿ, ಲೋಕೇಶ್, ವೀರೇಶ್, ವೀರಣಗೌಡ, ಬಸವನಗೌಡ ಸೇರಿದಂತೆ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.