ಮುದ್ದೇಬಿಹಾಳ: ಗ್ರಾಮೀಣ ಭಾಗದಲ್ಲಿ ಅಡಗಿರುವ ಜನಪದ ಬೇರಿನಿಂದಲೇ ಭಾರತ ದೇಶದ ಸಂಸ್ಕೃತಿ ಉಳಿದಿದೆ ಹೊರತು ಕೇವಲ ಅಕ್ಷರಸ್ಥರಿಂದಲ್ಲ. ನಮ್ಮ ನಾಡಹಬ್ಬ ದಸರಾ ಉತ್ಸವವನ್ನು ಜಗತ್ತೇ ತಿರುಗಿ ನೋಡುವಂತಾಗಿರುವುದೇ ಇದಕ್ಕೆ ಉತ್ತಮ ಉದಾಹರಣೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಬೆಂಗಳೂರು ಬೇಕರಿ ಸಭಾಭವನದಲ್ಲಿ ಶನಿವಾರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಘಟಕದ ಅಧ್ಯಕ್ಷರು ಹಾಗೂ ಸದಸ್ಯರ ಪದಗ್ರಹಣ, ‘ಜನಪದ ಚರಗ’ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ತಾಲೂಕಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಜಾನಪದ ಪರಿಷತ್ತು ಗ್ರಾಮೀಣ ಭಾಗದಲ್ಲಿ ಮರೆಮಾಚಿಕೊಂಡಿರುವ ಜನಪದ ಕಲಾವಿದರನ್ನು ಗುರುತಿಸಿ, ಅವರ ಕಲೆಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿಶ್ವದ ಹಲವು ದೇಶಗಳಲ್ಲಿ ಸಂಸ್ಕೃತಿ ಮತ್ತು ಪರಂಪರೆಗಳು ನಾಶವಾಗಿವೆ. ಆದರೆ ಭಾರತದಲ್ಲಿ ಇಂದಿಗೂ ಅವು ಜೀವಂತವಾಗಿರುವುದು ಹೆಮ್ಮೆಯ ಸಂಗತಿ. ಮುಂದಿನ ಪೀಳಿಗೆಗೂ ಈ ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಜಾನಪದ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತು ಪ್ರಮುಖ ಪಾತ್ರ ವಹಿಸುತ್ತಿದೆ. ಪರಿಷತ್ತಿನಲ್ಲಿದ್ದ ಕೆಲವರು ನಂತರ ಹೊರಬಂದು ‘ಕನ್ನಡ ಜಾನಪದ ಪರಿಷತ್ತು’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಜಾನಪದ ಪರಿಷತ್ತು ಬೇರೆ ಬೇರೆ ಸಂಸ್ಥೆಗಳಾಗಿವೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳುವುದು ಅಗತ್ಯ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಸರ್ಕಾರದಿಂದ ಮಾನ್ಯತೆ ಪಡೆದ ಮೊದಲ ಜಾನಪದ ಪರಿಷತ್ತಾಗಿದ್ದು, ಪರಿಷತ್ತಿನ ವತಿಯಿಂದ ನಡೆಯುವ ಕಾರ್ಯಕ್ರಮಗಳು ಅಧಿಕೃತವಾಗಿವೆ. ಜಾನಪದ ಸಂಸ್ಕೃತಿಯ ಉಳಿವಿಗಾಗಿ ಸರ್ಕಾರವೂ ಪರಿಷತ್ತಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಜವಾಬ್ದಾರಿ ನೀಡಿದೆ ಎಂದು ವಿವರಿಸಿದರು.
ಬಸರಕೋಡದ ಪವಾಡ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಕೆ.ವೈ. ಬಿರಾದಾರ ಕಾರ್ಯಕ್ರಮವನ್ನು ಜೋಳದ ತೆನೆಗಳನ್ನು ಕಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.
‘ಜನಪದ ಚರಗ’ ಕೃತಿ ಲೋಕಾರ್ಪಣೆ: ಡಾ. ಪ್ರಕಾಶ ನರಗುಂದ ಸಂಪಾದಿಸಿರುವ ‘ಜನಪದ ಚರಗ’ ಕೃತಿಯನ್ನು ಎಸ್.ಜಿ.ವಿ.ಸಿ. ವಿದ್ಯಾಪ್ರಸಾರಕ ವಿಶ್ವನಿಧಿ ಕಾರ್ಯದರ್ಶಿ ಅಶೋಕ ತಡಸದ ಲೋಕಾರ್ಪಣೆ ಮಾಡಿದರು.
ಜಾನಪದ ಹಾಡಿನ ಮೂಲಕ ಗಮನ ಸೆಳೆದ ಸುಪ್ರಿತಾ: ತಾಲೂಕಿನ ಗೋನಾಳ ಪಿ.ಎನ್. ಗ್ರಾಮದ ಜಾನಪದ ಕಲಾವಿದೆ ಕುಮಾರಿ ಸುಪ್ರೀತಾ ಗೋನಾಳ ಅವರು ಇತ್ತೀಚೆಗೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿದ ಘಟನೆಯನ್ನು ಜಾನಪದ ಹಾಡಿನ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿ ಎಲ್ಲರ ಗಮನ ಸೆಳೆದರು.
ಕಳ್ಳತನ ಪ್ರಕರಣವನ್ನು ಭೇದಿಸಿದ ಐಜಿಪಿ, ಎಸ್‌ಪಿ, ಸಿಪಿಐ ಹಾಗೂ ಪಿಎಸ್‌ಐ ಸಂಜಯ ತಿಪ್ಪಾರಡ್ಡಿ ಅವರ ತಂಡದ ಸಾಧನೆಯನ್ನು ಹಾಡಿನ ಮೂಲಕ ಬಣ್ಣಿಸಿದ ಸುಪ್ರೀತಾ ಅವರ ಕಲೆಯನ್ನು ಮೆಚ್ಚಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಅವರು ಕಲಾವಿದೆಯನ್ನು ಸನ್ಮಾನಿಸಿ ಹಾಡಿಗಾಗಿ ಸಹಾಯಧನ ನೀಡಿ ಗೌರವಿಸಿದರು.
ವಿವಿಧ ಗ್ರಾಮಗಳ ಜಾನಪದ ಕಲಾವಿದರಿಗೆ ಸನ್ಮಾನ: ಕಳೆದ ಮೂರು ತಿಂಗಳಿಂದ ಮುದ್ದೇಬಿಹಾಳ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಲ್ಲಿನ ಜಾನಪದ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ಕಜಾಪ ತಾಲೂಕಾಧ್ಯಕ್ಷ ಎ.ಆರ್. ಮುಲ್ಲಾ ಅವರು ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಹುಲ್ಲೂರ ಗ್ರಾಮದ ಭಜನಾ ಕಲಾವಿದ ಗುರುಪಾದಪ್ಪ ಚಲವಾದಿ, ಪೀರಾಪುರ ಗ್ರಾಮದ ಬಯಲಾಟ ಶಿಕ್ಷಕ ಬಿ.ಎಸ್. ಬಿರಾದಾರ, ಕಾಶಿನಕುಂಟಿ ಗ್ರಾಮದ ರಂಗಭೂಮಿ ಕಲಾವಿದ ಬಂದಗಿಸಾಬ ಬಿಲಕೇರಿ, ಮಡಿಕೇಶ್ವರ ಗ್ರಾಮದ ಭಜನಾ ಕಲಾವಿದ ಸುಭಾಸ ಚಲವಾದಿ, ಕೋಳೂರ ಗ್ರಾಮದ ಹಾರ್ಮೋನಿಯಂ ಕಲಾವಿದ ಶೇಖಪ್ಪ ಕತ್ತಿ, ಅಬ್ಬಿಹಾಳ ಗ್ರಾಮದ ಭಜನಾ ಕಲಾವಿದ ಸಿದ್ದಪ್ಪ ಅಂಕನಾಳ, ಹರೀಂದ್ರಾಳ ಗ್ರಾಮದ ಶಹನಾಯಿ ಕಲಾವಿದ ರಮೇಶ ಭಜಂತ್ರಿ, ದೇವರ ಹುಲಗಬಾಳ ಗ್ರಾಮದ ಸೋಬಾನೆ ಕಲಾವಿದೆ ಚನ್ನಮ್ಮ ಪಾಟೀಲ, ಅಮರಗೋಳ ಗ್ರಾಮದ ಭಜನಾ ಕಲಾವಿದ ಶಿವಪ್ಪ ಅಮರಗೋಳ, ಕುಂಟೋಜಿ ಗ್ರಾಮದ ಹಂತಿಪದ ಕಲಾವಿದ ಎಂ.ಪಿ. ವಾಳದವರ, ಗೋನಾಳ ಪಿ.ಎನ್. ಗ್ರಾಮದ ಭಜನಾ ಕಲಾವಿದೆ ಕುಮಾರಿ ಸುಪ್ರಿತಾ ಗೋನಾಳ ಹಾಗೂ ಬಿದರಕುಂದಿ ಗ್ರಾಮದ ಜಾನಪದ ಕಲಾವಿದ ಎಸ್.ಕೆ. ಘಾಟಿ ಅವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ನಶೆ ಮುಕ್ತ ಪ್ರತಿಜ್ಞಾ ಅಭಿಯಾನಕ್ಕೆ ಚಾಲನೆ: ಮುದ್ದೇಬಿಹಾಳ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಹಿಳಾ ಘಟಕದ ವತಿಯಿಂದ ದಾದಿ ಪ್ರಕಾಶಮಣಿ ಜೀ ಅವರ ಸ್ಮರಣೆಯಲ್ಲಿ ಹಮ್ಮಿಕೊಂಡಿರುವ ‘ನಶೆ ಮುಕ್ತ ಭಾರತ ಅಭಿಯಾನ’ ಹಾಗೂ ‘ಮಿಷನ್ ಸ್ಪಂದನ’ದಡಿ 10 ಕೋಟಿ ನಶೆಮುಕ್ತ ಪ್ರತಿಜ್ಞೆ ಸ್ವೀಕರಿಸುವ ಮಹಾ ಅಭಿಯಾನಕ್ಕೆ ಕರ್ನಾಟಕ ಜಾನಪದ ಪರಿಷತ್ ವೇದಿಕೆಯ ಮೂಲಕ ಚಾಲನೆ ನೀಡಲಾಯಿತು.
ವಿಕಸಿತ ಭಾರತದತ್ತ ಸಬಲ ಹೆಜ್ಜೆಯನ್ನಿಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರು ನಶೆಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಲ್.ಎನ್. ನಾಯ್ಕೋಡಿ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರೆಹಮಾನ ಬಿದರಕುಂದಿ, ಕಜಾಪ ಕಾರ್ಯಾಧ್ಯಕ್ಷ ಸಂಗಣ್ಣ ಕಂಚ್ಯಾಣಿ, ಎಲ್.ಎಂ. ಚಲವಾದಿ, ಎಂ.ಎನ್. ಮಾಗಿ, ಚೇತನ ಶಿವಶಿಂಪಿ, ಸರಸ್ವತಿ ಪೀರಾಪೂರ, ಹುಸೇನ ಮುಲ್ಲಾ, ಎಂ.ವಿ. ಬೀಳೇಭಾವಿ, ರಮೇಶ ಇಂಗಳಗಿ, ವಿಜಯ ಸೋನಾರ, ಮಹ್ಮದ್ ರಫೀಕ್ ಢವಳಗಿ, ರಫೀಕ್ ಶಿರೋಳ, ಬಸವರಾಜ ಹರವಾಳ, ಪರಶುರಾಮ ಚೌಡಕೇರ, ಎಸ್.ಆರ್. ಪಾಟೀಲ, ರೂಪರಾಣಿ ಪಟೇಗಾರ, ನರಸಮ್ಮ ಗುಬಚಿ ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ಜಾನಪದಾಸಕ್ತರು ಉಪಸ್ಥಿತರಿದ್ದರು.