-
ತಾಳಿಕೋಟೆ, ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ೧೪ನೇ ದಿನದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸಂದರ್ಬದಲ್ಲಿ ಬುಧವಾರರಂದು ಮದ್ಯಾಹ್ನದ ಸಮಯದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ಬಿಸಿಲಿನ ತಾಪಕ್ಕೆ ತಲೆ ಸುತ್ತಿ ಸುಸ್ತಾಗಿ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ.
ಧರಣಿ ಸಂದರ್ಭದಲ್ಲಿ ಬಿಸಿಲಿನ ತಾಪದಿಂದ ಅರವಿಂದ ಕುಲಕರ್ಣಿ ಅವರು ತಲೆತಿರುಗಿ ಕುಸಿದು ಬಿದ್ದಿದ್ದರಿಂದ ಸ್ಥಳದಲ್ಲಿದ್ದ ರೈತ ಮುಖಂಡರು ತಕ್ಷಣ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಆದಪ್ಪಗೌಡ ಬಿರಾದಾರ ಹಾಗೂ ತಹಶೀಲ್ದಾರ್ ಎಂ.ಎಚ್.ಅರಕೇರಿ ಅವರು ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ನಡೆಸುವದರೊಂದಿಗೆ ಚಿಕೀತ್ಸೆ ನೀಡಿದ್ದಾರೆ. ಧರಣಿ ಸ್ಥಳದಲ್ಲಿ ಬೀಸಿಲಿನ ತಾಪ ಹೆಚ್ಚಾಗಿದ್ದರಿಂದ ರೈತ ಮುಖಂಡ ಅರವಿಂದ ಕುಲಕರ್ಣಿ ಅವರಿಗೆ ತಲೆ ಸುತ್ತಿ ಹೊಟ್ಟೆಯಲ್ಲಿ ಉಂಟಾಗಿ ಈ ರೀತಿ ಆಗಿದೆ ಸೂಕ್ತ ಚಿಕೀತ್ಸೆ ನೀಡಲಾಗಿದೆ ಎಂದು ಪತ್ರಿಕೆಗೆ ಮಾಹಿತಿ ಹಂಚಿಕೊಂಡರು. ಚಿಕೀತ್ಸೆಯ ಬಳಿಕ ಚೇತರಿಸಿಕೊಂಡ ಕುಲಕರ್ಣಿ ಅವರು ಧರಣಿ ಮುಂದುವರಿಸಿದರು.
ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ-ಹಗರಟಗಿ ತಾಳಿಕೋಟೆ, ಯಾದಗಿರಿ ಜಿಲ್ಲೆಯಿಂದ ಆಗಮಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಮಾತನಾಡಿ, ಕಳೆದ ೧೪ ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಜಯಪುರ ಜಿಲ್ಲೆಯಲ್ಲಿ ಬರಗಾಲ ಘೋಷಣೆಯಿಂದ ಹೊರಗುಳಿದಿರುವ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೇಂದ್ರದ ಮೇಲೆ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಆರೋಪ-ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ರೈತರ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದ ಎಲ್ಲ ರೈತ ಸಂಘಟನೆಗಳು ಒಗ್ಗೂಡಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು. ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ರಸ್ತೆ ಮಧ್ಯೆ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಈ ಸಮಯದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠಲ ಬಿರಾದಾರ, ಜಿಲ್ಲಾ ಅಧ್ಯಕ್ಷ ಉಮೇಶ್ ವಾಲೀಕರ, ಬಾಳಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ ಸೇರಿದಂತೆ ರೈತ ಮುಖಂಡರು ಮಾತನಾಡಿದರು. ಮುತ್ತುಗೌಡ ಪರಸನಹಳ್ಳಿ, ಗುರುನಾಥ ರೆಡ್ಡಿ ಹದನೂರು, ಶಿವಶರಣಪ್ಪ ಸಾಹುಕಾರ, ಸಂಜು ಬಿರಾದಾರ, ಬಸವರಾಜ ಹೊಸಹಳ್ಳಿ, ಸುಭಾಷ ಗುಂದಗಿ, ಮಡಿವಾಳಪ್ಪ ಕಲಬುರಗಿ, ಶಂಕರಗೌಡ ಕೋಳೂರ, ಲಿಂಗನಗೌಡ ಟಕ್ಕಳಕಿ, ಅಶೋಕ ಉಪ್ಪಲದಿನ್ನಿ, ಶೇಠ ಸಾಹುಕಾರ ಜಲಪುರ, ಹನುಮಂತಗೌಡ ಬಿರಾದಾರ, ಮಹಿಳಾ ರೈತ ಮುಖಂಡರಾದ ಪವಿತ್ರ ಬಡಿಗೇರ್ ಹಾಗೂ ಸಾವಿತ್ರಿ ವಂದಗನೂರು ಸೇರಿದಂತೆ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು.