ಜಮಖಂಡಿ,ಜೂ,೦೮: ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳು ಪೂರಕವಾಗಿವೆ ಎಂದು ಪ್ರಾಧ್ಯಾಪಕ ಕೆ.ಬಿ. ಬೆಳಗಲಿ ಹೇಳಿದರು.
ತಾಲ್ಲೂಕಿನ ಮೈಗೂರ ಗ್ರಾಮದ ಕೆಪಿಎಸ್ ಪ್ರಾಥಮಿಕ ವಿಭಾಗದ ಶಾಲಾ ಮಕ್ಕಳು ಕ್ರೀಡಾ ಜ್ಯೋತಿಯ ಮಾದರಿಯಲ್ಲಿ ಗ್ರಾಮದ ಪ್ರಮುಖ ಗಲ್ಲಿಗಳಲ್ಲಿ ವಿದ್ಯಾಜ್ಯೋತಿ ದಿವಿಗೆ ಹಿಡಿದು ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಬ್ಲಿಕ್ ಶಾಲೆಗಳಿಗೆ ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಮಕ್ಕಳಿಗೆ ಯಾವುದೇ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರ ವಹಿಸುತ್ತಿದೆ. ಮಕ್ಕಳ ಜ್ಞಾನಾರ್ಜನೆಗೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಪಬ್ಲಿಕ್ ಶಾಲೆಗಳಿಗೆ ದಾಖಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳಾದ ಬಾಹುಬಲಿ ಕವಟಕೊಪ್ಪ, ಸಂಗೊಳ್ಳಿ ಮಠಪತಿ, ಬಸವರಾಜ ಹರೋಲಿ, ಮಹಾದೇವ ಬಿಮನಹಳ್ಳಿ, ಸಂಜು ಹೆಗ್ಗಳಗಿ ಹಾಗೂ ಶಿವಪ್ಪ ಶಿಂಗೆ ಅವರು ಜಂಟಿಯಾಗಿ ವಿದ್ಯಾಜ್ಯೋತಿ ದಿವಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ಎಲ್. ಪಾಟೀಲ, ಉಪಪ್ರಾಚಾರ್ಯ ಬಿ.ಎಂ. ಬಳೋಮಟ್ಟಿ, ಮುಖ್ಯಶಿಕ್ಷಕ ಎಂ.ಡಿ. ತೇಲಸಂಗ, ಸಿಆರ್‌ಪಿ ಬಿ.ಎಸ್. ಮುಧೋಳ, ಈರಪ್ಪ ಲಕ್ಕಪ್ಪಗೊಳ, ಎ.ಎ. ಬಿರಾದಾರ, ವಿದ್ಯಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
