ಧಾರವಾಡ,,09 ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2026ರ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 13,53,946 ಮತದಾರರು ಕರಡು ಪಟ್ಟಿಯಲ್ಲಿ ದಾಖಲಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಹೇಳಿದರು.
ಇಂದು (ಸ.9) ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿದ್ದ ಒಟ್ಟು 16,21,961 ಮತದಾರರ ಪೈಕಿ ಶೇ. 83.48 ರಷ್ಟು ಅಂದರೆ 13,53,946 ಮತದಾರರ ಮಾಹಿತಿ ಪರಿಶೀಲಿಸಿ ಕರಡು ಪಟ್ಟಿಗೆ ತರಲಾಗಿದೆ ಎಂದು ಅವರು ಹೇಳಿದರು.
ಆಗಸ್ಟ್ 29, ಮತ್ತು 30, 2026 ರಂದು ನಡೆದ ವಿಶೇಷ ಅಭಿಯಾನದಲ್ಲಿ ಹೊಸ ಮತದಾರರ ನೋಂದಣಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಒಟ್ಟು 1,431 ಅರ್ಜಿಗಳು ಸ್ವೀಕರಿಸಲಾಗಿದೆ. ಇದರಲ್ಲಿ ಫಾರ್ಮ್-6 ರ 1,114 ಅರ್ಜಿಗಳು, ಫಾರ್ಮ್-7 ರ 18 ಹಾಗೂ ಫಾರ್ಮ್-8 ರ 299 ಅರ್ಜಿಗಳು ಸೇರಿವೆ. ಮತದಾರರು ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಸೇರಿದಂತೆ ಅಗತ್ಯ ಸೇವೆಗಳಿಗೆ ಚುನಾವಣಾ ಆಯೋಗದ Voters Portal (voters.eci.gov.in) ಹಾಗೂ ಅಧಿಕೃತ ECI NET Mobile Applicationಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ಅರ್ಹ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ, ಹೆಸರು ಇಲ್ಲದಿದ್ದಲ್ಲಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಹಾಗೆಯೇ ಕರಡು ಪಟ್ಟಿಯಲ್ಲಿರುವ ತಪ್ಪುಗಳಿದ್ದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 33,987 ಅನಾಮಲಿಗಳು ಮತ್ತು 13,950 ಮ್ಯಾಪಿಂಗ್ ಆಗದ ಮತದಾರರು ಗುರುತಿಸಲ್ಪಟ್ಟಿದ್ದು, ಒಟ್ಟು 47,937 ನೋಟಿಸ್‍ಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 47,939 ನೋಟಿಸ್‍ಗಳು ಜನರೇಟ್ ಆಗಿದ್ದು, 32,296 ನೋಟಿಸ್‍ಗಳು ವಿತರಿಸಲ್ಪಟ್ಟಿವೆ. ಇನ್ನೂ 15,643 ನೋಟಿಸ್‍ಗಳ ವಿತರಣೆ ಬಾಕಿ ಇದೆ. 2,587 ವಿಚಾರಣೆಗಳು ನಡೆದಿದ್ದು, 2,657 ಪ್ರಕರಣಗಳಲ್ಲಿ ವಿಚಾರಣಾ ದಿನಾಂಕ ಮುಗಿದಿದೆ ಎಂದು ಅವರು ತಿಳಿಸಿದರು.
ಚುನಾವಣಾ ನೋಂದಣಿ ಅಧಿಕಾರಿಗಳು (ERO), ಹೆಚ್ಚುವರಿ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (AERO),BLOಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೆಚ್ಚುವರಿ ಜವಾಬ್ದಾರಿಗಳಿಗೆ ನಿಯೋಜಿಸಲಾಗಿದೆ. ಮತದಾರರ ಪಟ್ಟಿಯಲ್ಲಿನ ಯಾವುದೇ ತಪ್ಪು, ಬದಲಾವಣೆ ಅಥವಾ ಅನಾಮಲಿ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ, ಅರ್ಹ ಮತದಾರರ ಹಕ್ಕುಗಳು ಸುರಕ್ಷಿತವಾಗಿರುವಂತೆ ಪ್ರಕ್ರಿಯೆ ನಡೆಸುವುದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಪ್ರಗತಿ ಕುರಿತು ಇಂದು (ಸ.9) ಅಪರ ಜಿಲ್ಲಾಧಿಕಾರಿ ಗೀತಾ. ಸಿ.ಡಿ ಅವರ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಸಭೆ ಜರುಗಿಸಿ ಮಾತನಾಡಿದರು.
ಜಿಲ್ಲೆಯ 07 ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಒಟ್ಟು 1,665 ಮತಗಟ್ಟೆಗಳಿದ್ದು, ಪ್ರಸ್ತುತ 1,707 ಮತಗಟ್ಟೆಗಳನ್ನು ಪ್ರಸಿದ್ದಿಪಡಿಸಿರುತ್ತಾರೆ.
ಅಗಸ್ಟ್ 24, 2026 ರಂದು ಜಿಲ್ಲೆಯ 07 ವಿಧಾನಸಭಾ ಮತಕ್ಷೇತ್ರವಾರು ಪ್ರಸಿದ್ದಿಪಡಿಸಲಾದ ಕರಡು ಮತದಾರರ ಪಟ್ಟಿಗಳನ್ನು ಮತ್ತು ಭಾರತ ಚುನಾವಣಾ ಆಯೋಗದಿಂದ ಅನುಮೋದನೆಯಾದ ನಂತರದ ಜಿಲ್ಲೆಯ ಒಟ್ಟು 1,707 ಮತಗಟ್ಟೆಗಳ ಯಾದಿಗಳನ್ನು ಪ್ರಮುಖ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮಾಹಿತಿಗಾಗಿ ನೀಡಲಾಗಿದೆ.
ಜಿಲ್ಲೆಯಲ್ಲಿ ಜೂನ್ 16, 2026 ರಿಂದ ಅಗಸ್ಟ್ 23, 2026 ರ ವರೆಗೆ 15,044 ಅರ್ಜಿಗಳು ನಮೂನೆ-6, 64 ಅರ್ಜಿಗಳು 6ಎ, 530 ಅರ್ಜಿಗಳು ನಮೂನೆ-7, ಮತ್ತು 28,362 ಅರ್ಜಿಗಳು ನಮೂನೆ-8 ಸೇರಿ ಒಟ್ಟು 44,000 ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಿದ್ದಾರೆ.
ಅಗಸ್ಟ್ 24, 2026 ರಿಂದ ಸಪ್ಟೆಂಬರ 23, 2026 ವರೆಗೆ ಸ್ವೀಕೃತವಾಗುವ ನಮೂನೆ-6, 7 ಮತ್ತು 8 ನೇದ್ದವುಗಳನ್ನು ಹಾಗೂ ಎಸ್‍ಐಆರ್-2026 ನೋಟಿಸ್ ಜಾರಿಗೊಳಿಸಿ, ಅಗಸ್ಟ್ 24, 2026 ರಿಂದ ಅಕ್ಟೋಬರ್ 22, 2026 ರ ವರೆಗೆ ವಿಲೇವಾರಿ ಮಾಡಲು ಜಿಲ್ಲೆಯಲ್ಲಿ 78 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅರ್ಹ ಮತದಾರರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಇವರೆಗೆ ಭಾಗಿಯಾಗಿ ಯಶಸ್ವಿಗೊಳಿಸಲು ಸಹಕಾರ ನೀಡಿದ್ದು, ಅದರಂತೆ ಮುಂದಿನ ಅಕ್ಟೋಬರ್ 22, 2026ರ ವರೆಗೆ ಸಹಕಾರ ನೀಡಲು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿಗಳು ಉಪಸ್ಥಿತರಿದ್ದರು.