ಮುದ್ದೇಬಿಹಾಳ ೦೩ : ಮುದ್ದೇಬಿಹಾಳ ನಗರದ ಹಡಲಗೇರಿ ರಸ್ತೆಯಲ್ಲಿರುವ ಸರಕಾರಿ ತಾಲೂಕಾ ಅಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಮಲ್ಲನಗೌಡ ಬಿರಾದಾರ ರವರು ಧಿಡೀರ ಭೇಟಿ ನೀಡಿ ಇಲ್ಲಿನ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿದರು. ಮತ್ತು ಇಲ್ಲನ ವ್ಯವಸ್ಥೆ, ಸ್ವಚ್ಛತೆ ಮತ್ತು ರೋಗಿಗಳಿಗೆ ನೀಡುತ್ತಿರುವ ಸೇವೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಗೆ ಬರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ ಬರುವದರಿಂದ ಆಯಾ ಆಸ್ಪತ್ರೆಗಳ ಕಾರ್ಯಕ್ಷಮತೆ ಮತ್ತು ಸಾಧನೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೆ ಬಹಳ ಹತ್ತಿರದಿಂದ ತಿಳಿಯಬಹುದು ಎಂದು ಅವರು ಹೇಳಿದರು.
ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭಿಸಿರುವ ಹೆರಿಗೆ ಕೊಠಡಿ, ತುರ್ತು ಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ, ಹಾಗೂ ಇತರೆ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ಕಾರ್ಯ ವೈಖರಿ ಹಾಗೂ ರೋಗಿಗಳಿಗೆ ನೀಡುತ್ತಿರುವ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುದ್ದೇಬಿಹಾಳ ಆಸ್ಪತ್ರೆಯನ್ನು ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯತ್ತಮ ಆಸ್ಪತ್ರೆಯನ್ನಾಗಿ ರೂಪಿಸುವದಾಗಿ ಹೇಳಿದರು. ಆಸ್ಪತ್ರೆಯ ಬಗ್ಗೆ ಹೆಚ್ಚಿನ ಕಾಳಜಿವಹಿಸಿರುವ ಆಸ್ಪತ್ರೆಯ ವೈದ್ಯಾದಿಕಾರಿಗಳನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಆರ.ಎಂ.ಓ. ಅಧಿಕಾರಿ ಕೇಸುಸಿಂಗ್ ಗುಂಡಬಾಗಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಂಗನಾಥ ವೈದ್ಯ ಮತ್ತು ಶಿವಾನಂದ ನಾಡಗೌಡರರವರು ಇದ್ದರು.
*** ಕೋಟ್ ** ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವದರ ಬಗ್ಗೆ ಹೆಚ್ಚು ಗಮನ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಅಭಿನಂದನೆಗಳು. ಈಗ ಇಲ್ಲಿನ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ, ಅದರ ಕಡೆಗೂ ಗಮನಹರಿಸಿದರೆ ರೋಗಿಗಳಿಗೆ ಹೆಚ್ಚಿನ ಸೇವೆ ದೊರಕಿಸಲು ಅನುಕೂಲವಾಗುತ್ತದೆ.