ಸಂಕೇಶ್ವರ : ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿ. ಗಿರಿಮಲ್ಲ ಬಾಳೇಶ ನಷ್ಠಿ ಅವರ ಕುಟುಂಬಕ್ಕೆ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿಯ ಗ್ರೂಪ್ ಡೆತ್ ಇನ್ಶೂರೆನ್ಸ್ ಯೋಜನೆಯಡಿ ೧೦ ಲಕ್ಷ ರೂ. ಮೊತ್ತದ ವಿಮಾ ಪರಿಹಾರ ವಿತರಿಸಲಾಯಿತು.
ಕಾರ್ಖಾನೆಯ ಕೇನ್‌ಯಾರ್ಡ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ದಿ. ಗಿರಿಮಲ್ಲ ಬಾಳೇಶ ನಷ್ಠಿ ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗಿದ್ದರು. ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಗ್ರೂಪ್ ಡೆತ್ ಇನ್ಶೂರೆನ್ಸ್ ಯೋಜನೆಯಡಿ ಮಂಜೂರಾದ ಪರಿಹಾರದ ಚೆಕ್ ಅನ್ನು ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮೃತ ಕಾರ್ಮಿಕನ ಪತ್ನಿ ಸವಿತಾ ಗಿರಿಮಲ್ಲ ನಷ್ಠಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಕಾರ್ಯಾಲಯ ಅಧೀಕ್ಷಕ ಸುಭಾಷ್ ನಾಶಿಪುಡಿ, ಕಾರ್ಮಿಕ ಕಲ್ಯಾಣಾಧಿಕಾರಿ ಕೆ. ಎಂ. ಪಾಟೀಲ, ಸಮಯಪಾಲಕ ಎನ್. ಎಸ್. ಮರಬಸನ್ನವರ, ಸ್ಟೋರ್ ವಿಭಾಗದ ಶಂಕರ ನೇರ್ಲಿ, ಅತಿಥಿ ಗೃಹದ ಉಸ್ತುವಾರಿ ಶಿವಾನಂದ ಹಾಲಗಡಗಿ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
