ಬೆಳಗಾವಿ: ಲೋಕೋಪಯೋಗಿ ಸಚಿವ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಜಯರಾಮ ರಾಸಿಂಗೆ ಅವರನ್ನು ತಕ್ಷಣವೇ ಸಂಘಟನೆಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬೆಳಗಾವಿಯ ಪ್ರಮುಖ ದಲಿತ ಮುಖಂಡರು ಆಗ್ರಹಿಸಿದರು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಜಂಟಿ ಪತ್ರಿಕಾಗೋಷ್ಠಿ ಮಾತನಾಡಿದ ದಲಿತ ಮುಖಂಡರು, ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ನಮ್ಮ ನಾಯಕರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸತೀಶ್ ಜಾರಕಿಹೊಳಿ ಅವರು ಕೇವಲ ಜಿಲ್ಲೆ ಅಥವಾ ರಾಜ್ಯಕ್ಕೆ ಸೀಮಿತವಾದ ನಾಯಕರಲ್ಲ, ಅವರು ರಾಷ್ಟ್ರ ನಾಯಕರು. ನಮ್ಮ ಸಂಘಟನೆ ಮತ್ತು ದಲಿತ ಸಮಾಜದ ಬಗ್ಗೆ ಅವರಿಗೆ ಅಪಾರ ಗೌರವ ಹಾಗೂ ಹೆಮ್ಮೆಯಿದೆ ಎಂದು ಹೇಳಿದರು.
ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಜಯರಾಮ ರಾಸಿಂಗೆ ಅವರು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ದಲಿತ ಸಂಘಟನೆಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ರಾಸಿಂಗೆ ಹಿಂದೆ ಹತ್ತು ಜನ ಬೆಂಬಲಿಗರೂ ಇಲ್ಲ. ಅವನಿಗೂ ಚಲುವಾದಿ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಕಳೆದ 40 ವರ್ಷಗಳಲ್ಲಿ ಜಿಲ್ಲೆಯಲ್ಲಿ ಇಂತಹ ಕೀಳು ಮಟ್ಟದ ಘಟನೆಗಳು ನಡೆದಿಲ್ಲ. ಸತೀಶ್ ಅಣ್ಣಾ ಅವರು ನಮ್ಮನ್ನೆಲ್ಲ ಬಹಳಷ್ಟು ಪ್ರೀತಿಯಿಂದ ಬೆಳೆಸಿದ್ದಾರೆ. ಇಂತಹ ನಾಯಕರ ವಿರುದ್ಧವೇ ಪಿತೂರಿ ನಡೆಸುತ್ತಿರುವ ರಾಸಿಂಗೆ ಅವರನ್ನು ತಕ್ಷಣವೇ ಸಂಘಟನೆಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಮಹಾವೀರ ಮೋಹಿತೆ ಹಾಗೂ ಮಲ್ಲೇಶ ಚೌಗಲಾ ಮಾತನಾಡಿ, ಸತೀಶ್ ಜಾರಕಿಹೊಳಿ ಅವರಷ್ಟೇ ಅಲ್ಲದೆ, ಹಿಂದಿನಿಂದಲೂ ಪ್ರಭಾವಿ ದಲಿತ ನಾಯಕರನ್ನು ತುಳಿಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಸಿಂಗೆ ಅವರ ಈ ಹೇಳಿಕೆಯ ಹಿಂದೆ ಯಾರ ಕೈವಾಡವಿದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಯಾವ ನಾಯಕ ಎಲ್ಲಿಂದ ಬೆಳೆದು ಬಂದಿದ್ದಾರೋ, ಅಲ್ಲಿಂದಲೇ ಅವರನ್ನು ತುಳಿಯುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಕ್ಷಮೆಯಾಚನೆಗೆ ಗಡುವು: ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರಿಂದ ಇಂತಹ ಬೇಜವಾಬ್ದಾರಿ ಮತ್ತು ಗೊಂದಲಕಾರಿ ಹೇಳಿಕೆಗಳನ್ನು ಸಮಾಜ ನಿರೀಕ್ಷಿಸಿರಲಿಲ್ಲ. ಮಲ್ಲಿಕಾರ್ಜುನ ರಾಸಿಂಗೆ ಅವರು ತಕ್ಷಣವೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಒಂದು ವೇಳೆ ಅವರು ತಮ್ಮ ನಿಲುವನ್ನು ಬದಲಿಸದಿದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸುನೀತಾ ಐಹೊಳೆ, ಕೆಂಪ್ಪಣ್ಣ ಸಿರಹಟ್ಟಿ, ಮಹಾದೇವ ತಳವಾರ, ಬಾಹುಸಾಬ ಪಾಂಡರೆ, ವಿಕ್ರಂ ಕರನಿಂಗ, ಸಂಜೀವ ಕಾಂಬಳೆ, ಶಾನುರ ತಹಶೀಲ್ದಾರ್ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
