ತಾಳಿಕೋಟೆ, ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ ವಿಬಿ-ಜಿ ರಾಮ್-ಜಿ ಯೋಜನೆಯಡಿ ವಿಜಯಪುರ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಮಂಗಳವಾರ ತಾಳಿಕೋಟಿ ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪೂರ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಶಿವಪೂರ ಗ್ರಾಮದ ಸರ್ವೆ ನಂ.೧೦೪ರ ಗಾಂ ಠಾಣ ಜಾಗದಲ್ಲಿ ನಡೆಯುತ್ತಿದ್ದ ಕಂದಕಗಳ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯ ಪ್ರಗತಿ ಹಾಗೂ ಸೃಜನೆಯಾಗಿರುವ ಮಾನವ ದಿನಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೊಂದಿಗೆ ಸಂವಾದ ನಡೆಸಿ, ಅವರ ಕುಂದು-ಕೊರತೆಗಳನ್ನು ಆಲಿಸಿದರು. ಕೂಲಿಕಾರರ ಶ್ರಮವನ್ನು ಗೌರವಿಸಿ ಸನ್ಮಾನಿಸಿದರು. ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗದ ಅಗತ್ಯ ಹೆಚ್ಚಿರುವುದರಿಂದ, ಹೆಚ್ಚಿನ ಸಂಖ್ಯೆಯ ಅರ್ಹರಿಗೆ ನಿರಂತರವಾಗಿ ಕೆಲಸ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯಡಿ ಪ್ರತಿ ದಿನ ೩೮೨ ಕೂಲಿ ಹಾಗೂ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ ೧೨೫ ದಿನಗಳ ಉದ್ಯೋಗಾವಕಾಶ ದೊರೆಯಲಿದ್ದು, ಅರ್ಹ ಗ್ರಾಮೀಣ ಕುಟುಂಬಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಿವಪೂರ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಚಾಲನೆ ನೀಡಿದರು. ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಕೂಲಿಕಾರರಿಗೆ ಕಡ್ಡಾಯವಾಗಿ ಉದ್ಯೋಗ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಾಳಿಕೋಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನುಸೂಯಾ ಚಲವಾದಿ, ಸಹಾಯಕ ನಿರ್ದೇಶಕ (ಗ್ರಾ.ಉ.) ಪಿ.ಎಸ್. ಕಸನಕ್ಕಿ, ಮೂಕಿಹಾಳ ಪಿಡಿಓ ಪಿ.ಎಸ್. ಗಾಣಗೇರ, ತಾಂತ್ರಿಕ ಸಂಯೋಜಕ ಮಹಾಂತೇಶ ಕಿಲಾರಟ್ಟಿ, ಐಇಸಿ ಸಂಯೋಜಕ ಮಲಕಪ್ಪ, ತಾಂತ್ರಿಕ ಸಹಾಯಕರಾದ ಮಹಾಂತೇಶ ಪಾಟೀಲ ಹಾಗೂ ಅನ್ನಾನ ಅಹಮ್ಮದ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್.ಎಂ. ಬಿರಾದಾರ, ಡಿಇಒ ಡಿ.ಎಸ್. ಹಿರೇಮಠ, ಕಾಯಕಮಿತ್ರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.