ಮೂಡಲಗಿ: ಮೂಡಲಗಿ ವಲಯದ ವಿದ್ಯಾರ್ಥಿಗಳಿಗೂ ಚಿಣ್ಣರ ವನ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಅಜೀತ್ ಮನ್ನಿಕೇರಿ ಹೇಳಿದರು.
ಗುರುವಾರದಂದು ಪಟ್ಟಣದ ಎಸ್.ಎಸ್.ಆರ್. ಕಾಲೇಜು ಮೈದಾನದಲ್ಲಿ ಚಿಣ್ಣರ ವನ ದರ್ಶನ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ೨೦೨೬-೨೭ನೇ ಸಾಲಿನ ಚಿಣ್ಣರ ವನ ದರ್ಶನ ಕಾರ್ಯಕ್ರಮದಲ್ಲಿ ಮೂಡಲಗಿ ವಲಯದ ವಿದ್ಯಾರ್ಥಿಗಳಿಗೂ ಅವಕಾಶ ನೀಡುವಂತೆ ನಿಸರ್ಗ ಫೌಂಡೇಶನ್ ವತಿಯಿಂದ ಅರಣ್ಯ ಇಲಾಖೆಯ ಡಿಸಿಎಫ್ ಪ್ರಭಾಕರ ಪ್ರಿಯದರ್ಶಿ ಹಾಗೂ ಗೋಕಾಕ ವಲಯ ಅರಣ್ಯಾಧಿಕಾರಿ ಆನಂದ್ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮೂಡಲಗಿ ವಲಯದ ಇತಿಹಾಸದಲ್ಲಿ ವಿದ್ಯಾರ್ಥಿಗಳಿಗಾಗಿ ಇಂತಹ ವಿಶೇ? ಕಾರ್ಯಕ್ರಮ ರೂಪುಗೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಿಸರ್ಗ ಫೌಂಡೇಶನ್‌ನ ಸರ್ವ ಸದಸ್ಯರು ಕೈಗೊಂಡ ಪ್ರಯತ್ನ ಅಭಿನಂದನಾರ್ಹವಾಗಿದೆ. ಚಿಣ್ಣರ ವನ ದರ್ಶನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಬೆರೆತು ಅದರ ಮಹತ್ವ ಅರಿತುಕೊಳ್ಳಲು ಇಂತಹ ಪ್ರವಾಸಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ಸುರೇಶ ಕುಂದರಗಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಚಿಣ್ಣರ ವನ ದರ್ಶನ ಕಾರ್ಯಕ್ರಮದ ಉದ್ದೇಶ, ಮಹತ್ವ ಹಾಗೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಕುರಿತು ವಿವರವಾದ ಮಾಹಿತಿ ನೀಡಿದರು. ಅರಣ್ಯದ ಮಹತ್ವ, ಪರಿಸರ ಸಮತೋಲನ ಕಾಪಾಡುವಲ್ಲಿ ಮರಗಳ ಪಾತ್ರ, ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರಕೃತಿಯ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಅರಣ್ಯ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ಪ್ರಕೃತಿಯ ವೈವಿಧ್ಯತೆ, ಸಸ್ಯಸಂಪತ್ತು ಮತ್ತು ವನ್ಯಜೀವಿಗಳ ಜೀವನ ಕ್ರಮವನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಲು ಈ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು. ಚಿಣ್ಣರ ವನ ದರ್ಶನಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ಬ್ಯಾಗ್, ಅರಣ್ಯ ಬಗ್ಗೆ ಪರಿಚಯ ಪುಸ್ತಕ, ಕ್ಯಾಪ್, ಲೇಖನಿ ಸಾಮಗ್ರಿಗಳು ಸೇರಿದಂತೆ ಒಂದು ಕಿಟ್ ವಿತರಣೆ ಮಾಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ, ಅರಣ್ಯ ಇಲಾಖೆ ಅಧಿಕಾರಿಗಳಾದ ಮಹಾಂತೇಶ ಹಿಪ್ಪರಗಿ, ಭೀಮಪ್ಪ ಪಾಕನಟ್ಟಿ, ನಿರ್ಸಗ ಫೌಂಡೇಶನ್ ಅಧ್ಯಕ್ಷ ಈರಪ್ಪ ಢವಳೇಶ್ವರ, ಉಪಾಧ್ಯಕ್ಷ ಮಲ್ಲು ಬೋಳನವರ, ಸದಸ್ಯ ಓಂ ಸಂತಾ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.