ರಾಮದುರ್ಗ: ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯ ಶೌರ್ಯ, ಆದರ್ಶಗಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ. ಹಿರಿಯರು ಚೆನ್ನಮ್ಮಾಜಿಯಂತ ಮಹನೀಯರ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯತೆ ಇದೆ ಎಂದು ತಹಶೀಲ್ದಾರ ಪ್ರಕಾಶ ಗಾಯಕವಾಡ ಹೇಳಿದರು.
ನಗರದ ತಾಲುಕಾ ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಏರ್ಪಡಿಸಿದ ವೀರರಾಣಿ ಕಿತ್ತೂರ ಚೆನ್ನಮ್ಮಾಜಿ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಿಟಿಷ್ ಸರಕಾರದ ವಿರುದ್ಧ ೧೮೨೪ ರಲ್ಲಿ ಚೆನ್ನಮ್ಮಾಜಿ ಹೋರಾಡಿ ವಿಜಯ ಸಾಧಿಸಿದ ಪ್ರಯುಕ್ತ ಪ್ರತಿವರ್ಷ ಅಕ್ಟೋಬರ-೨೩ ರಿಂದ ಮೂರು ದಿನಗಳ ವರೆಗೆ ಕಿತ್ತೂರಿನಲ್ಲಿ ಉತ್ಸವ ಆಚರಣೆ ಮಾಡಿ, ಚೆನ್ನಮ್ಮಾಜಿ ಆದರ್ಶ ತಿಳಿಸುವ ಜೊತೆಗೆ ನಾಡಿನ ಸಂಸ್ಕೃತಿಯನ್ನು ಬಿಂಭಿಸುವ ಕಾರ್ಯಕ್ರಮಗಳನ್ನು ಸರಕಾರದ ನೇತೃತ್ವದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.
ಪತ್ರಕರ್ತ ಗೌಡಪ್ಪಗೌಡ ಪಾಟೀಲ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ಮಹಿಳಾ ಹೋರಾಟಗಾರ್ತಿ ಕಿತ್ತೂರ ರಾಣಿ ಚೆನ್ನಮ್ಮಾಜಿ, ಸಂಗೋಳ್ಳಿ ರಾಯಣ್ಣನವರನ್ನು ಬಲಗೈ ಬಂಟನಾಗಿ ಪಡೆದು, ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿದ್ದಾರೆ. ಅವರ ದೇಶಾಭಿಮಾನ ಶ್ಲಾಘನೀಯ. ಅವರ ಆದರ್ಶಗಳನ್ನು ತಿಳಿಯಲು ಸರಕಾರ ಮಹಾತ್ಮರ, ಹೋರಾಟಗಾರರ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ವಿ. ನಾಡಗೌಡ್ರ, ಮಾರುತಿ ಬಸಿಡೋಣಿ, ನಿಂಗನಗೌಡ ಪಾಟೀಲ, ನ್ಯಾಯವಾದಿಗಳಾದ ಮೋಹನ್ ಸೋರಿ, ಜಿ.ಬಿ. ಅಮಟೂರ, ಬಸೀರಹ್ಮದ ಬೈರಕದಾರ, ಶಿಕ್ಷಣ ಇಲಾಖೆಯ ಪ್ರಕಾಶ ಛಾಯಪ್ಪಗೋಳ, ತಾಲೂಕಾ ಮಟ್ಟದ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಮತ್ತಿತರು ಉಪಸ್ಥಿತರಿದ್ದರು.