ಅಥಣಿ : ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರಿನ ರಾಣಿ ಚೆನ್ನಮ್ಮನ ಧೈರ್ಯ, ಶೌರ್ಯ ಮತ್ತು ದೇಶಪ್ರೇಮ ನಮ್ಮೆಲ್ಲರಿಗೆ ಪ್ರೇರಣೆ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ತಹಸಿಲ್ದಾರ ಸಿದರಾಯ ಬೋಸಗಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಮಿನಿವಿಧಾನಸೌಧ ಹಾಗೂ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಜಯಂತಿ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಅವರಲ್ಲಿ ಕನ್ನಡ ನಾಡಿನ ಮೊಟ್ಟಮೊದಲ ಮಹಿಳೆ ಕಿತ್ತೂರು ಸಂಸ್ಥಾನದ ವೀರರಾಣಿ ಚೆನ್ನಮ್ಮ. ಬ್ರಿಟಿಷ್ ಅಧಿಕಾರಿ ಠಾಕ್ರೆ ವಿರುದ್ಧ ಹೋರಾಟವನ್ನು ಮಾಡಿದ ದಿಟ್ಟ ಮಹಿಳೆಯಾಗಿದ್ದಾಳೆ. ಆದ್ದರಿಂದ ಅವರನ್ನ ಸ್ವಾತಂತ್ರ್ಯ ಹೋರಾಟದ ಬೆಳ್ಳಿಯ ಚುಕ್ಕಿ ಎಂದು ಕರೆಯಲಾಗುತ್ತದೆ. ಅವರ ಜಯಂತಿ ಕಾರ್ಯಕ್ರಮ ಕೇವಲ ಭಾವಚಿತ್ರ ಪೂಜೆಗೆ ಸೀಮಿತವಾಗಬಾರದು, ಅವರ ಧೈರ್ಯ, ಸಾಹಸ ಮತ್ತು ದೇಶಪ್ರೇಮ ಇಂದಿನ ಯುವ ಜನಾಂಗಕ್ಕೆ ಮತ್ತು ಯುವತಿಯರಿಗೆ ಪ್ರೇರಣೆಯಾಗಬೇಕು ಎಂದರು.
ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ ಮಾತನಾಡಿ ಕಿತ್ತೂರು ರಾಣಿ ಚನ್ನಮ್ಮನ ಇತಿಹಾಸವು ಕೇವಲ ಪಠ್ಯಪುಸ್ತಕದ ಕಥೆಯಲ್ಲ, ಅದು ಯುವಜನರ ರಕ್ತದಲ್ಲಿ ದೇಶಪ್ರೇಮ, ಸ್ವಾಭಿಮಾನ ಮತ್ತು ಅದಮ್ಯ ಚೇತನವನ್ನು ತುಂಬುವ ದಿವ್ಯ ಮಂತ್ರವಾಗಿದೆ. ಅವರ ಸಾಹಸಮಯ ಜೀವನದ ಯಶೋಗಾಥೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವುದು ಅಗತ್ಯ. ಅದಕ್ಕಾಗಿ ಶಾಲಾ, ಕಾಲೇಜಿನ ಮಕ್ಕಳಿಗೆ ಭಾಷಣ ಸ್ಪರ್ಧೆ, ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ನಡೆಸುವುದು ಅಗತ್ಯ. ಅವರ ಜೀವನದ ಆದರ್ಶಗಳು ಇಂದಿನ ಯುವಕರಿಗೆ, ಮಹಿಳೆಯರಿಗೆ ಸ್ಪೂರ್ತಿಯ ಸೆಲೆಯಾಗಿವೆ ಎಂದರು.
ಕರವೇ ಅಧ್ಯಕ್ಷ ಶಬ್ಬೀರ್ ಸಾತಬಚ್ಚಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮನ ಆದರ್ಶಗಳು ನಮ್ಮೆಲ್ಲರಿಗೆ ಸ್ಪೂರ್ತಿಯಾಗಿವೆ, ಪಟ್ಟಣದ ಚನ್ನಮ್ಮ ವೃತ್ತವನ್ನು ಇನ್ನಷ್ಟು ಅಭಿವೃದ್ಧಿ ಮಾಡಿ ಇಲ್ಲಿ ಚೆನ್ನಮ್ಮ ಮೂರ್ತಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಪುರಸಭೆ ಮತ್ತು ತಾಲೂಕ ಆಡಳಿತ ಇಚ್ಛಾ ಶಕ್ತಿ ತೋರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಸಿಪಿಐ ಅಗ್ನಿ, ಅಭಿಯಂತರ್ ವೀರಣ್ಣ ವಾಲಿ, ಪ್ರವೀಣ್ ಹುಣಸಿಕಟ್ಟಿ, ಕೃಷಿ ಅಧಿಕಾರಿ ನಿಂಗನಗೌಡ ಪಾಟೀಲ, ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಹೆಸ್ಕಾಂ ಅಧಿಕಾರಿ ಗುರುರಾಜ ಸಂಪಣ್ಣವರ, ಬಿಸಿಎಂ ಅಧಿಕಾರಿ ವೆಂಕಟೇಶ ಕುಲಕರ್ಣಿ,ಅಶೋಕ ಸತ್ತಿಗೌಡರ,ಗಣೇಶ ಪವಾರ,
ಸೇರಿದಂತೆ, ಶಬ್ಬೀರ ಸಾತಬಚ್ಚೆ,
ಜಾಫರ ಪಟೇಲ,ಮಂಜು ಹೋಳಿಕಟ್ಟಿ, ಸೇರಿದಂತೆ ಕನ್ನಡಪರ ಹೋರಾಟಗಾರರು, ವೀರರಾಣಿ ಕಿತ್ತೂರು ಚೆನ್ನಮ್ಮನ ಅಭಿಮಾನಿಗಳು, ಉಪಸ್ಥಿತರಿದ್ದರು