ಕುಕನೂರು : ಗಾಂಧಿ ಜಯಂತಿ ಅಂಗವಾಗಿ ಗುರುವಾರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣವನ್ನು ಸ್ವಚ್ಛಗೊಳಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬಸ್ ನಿಲ್ದಾಣದ ವಿವಿಧ ಭಾಗಗಳಲ್ಲಿ ಸಂಗ್ರಹವಾಗಿದ್ದ ಕಸ, ತ್ಯಾಜ್ಯ ಹಾಗೂ ಅನಗತ್ಯ ವಸ್ತುಗಳನ್ನು ತೆರವುಗೊಳಿಸಿದರು.
ಅಲ್ಲದೆ ಪ್ರಯಾಣಿಕರು ಸಂಚರಿಸುವ ಸ್ಥಳಗಳು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಉತ್ತಮ ವಾತಾವರಣ ಕಲ್ಪಿಸುವ ಪ್ರಯತ್ನ ಮಾಡಿದರು.
ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ ಹಾಗೂ ಶಿಸ್ತುಬದ್ಧ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಆದರ್ಶಗಳನ್ನು ಸ್ಮರಿಸುವ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಗಾಂಧೀಜಿಯವರ ಸಂದೇಶವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಿದರು.
ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಸಹ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ನಿಗದಿತ ಸ್ಥಳದಲ್ಲಿಯೇ ಹಾಕುವ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ಸಾರಲಾಯಿತು.
ಗಾಂಧಿ ಜಯಂತಿಯ ಮುನ್ನಾ ದಿನವೇ ಸ್ವಚ್ಛತಾ ಕಾರ್ಯ ನಡೆಸಿ, ತಮ್ಮ ಕರ್ತವ್ಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಮೆರೆದ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಸಿ ವೆಂಕಟಚಲಪತಿ ಘಟಕ ವ್ಯವಸ್ಥಾಪಕರು, ನಾಗರಾಜ ಬಡಿಗೇರ ಟಿ ಸಿ, ಬಸಯ್ಯ ಟಿ ಸಿ, ಆನಂದ, ಸುಜಾತ ದೇಸಾಯಿ, ಬಸ್ಸಮ್ಮ ಜವಳಿ, ಶ್ರೀಕಾಂತ್ ಜಗತಾಪ, ವೀರಯ್ಯ ಹಿರೇಮಠ, ಹಾಗೂ ಘಟಕ ಸಿಬ್ಬಂದಿ ವರ್ಗದವರು ಇದ್ದರು.