ಬಾಗಲಕೋಟೆ : ಸೆಪ್ಟೆಂಬರ ೧೯: ಪೌಷ್ಠಿಕ ಆಹಾರವು ತಾಯಿ ಮತ್ತು ಮಗುವಿನ ಉತ್ತಮ ಆರೊಗ್ಯ ಹಾಗೂ ಮಕ್ಕಳ ಸಮಗ್ರ ಬೆಳೆವಣಿಗೆಗೆ ಪ್ರಮುಖ ಆಧಾರವಾಗಿದ್ದು, ಪೌಷ್ಠಿಕ ಆಹಾರದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳಿ ಅಭಿವೃದ್ದಿ ಹಾಗೂ ಶಿಶು ಅಭಿವೃದ್ದಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪೌಷ್ಠಿಕ ಆಹಾರದ ಮಹತ್ವ ಅರಿತು ಅನುಸರಿಸಬೇಕು ಎಂದರು.
ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಮುಖ್ಯವಾಗಿದ್ದು, ಗರ್ಭಾವಸ್ಥೆಯಿಂದಲೇ ತಾಯಂದಿರು ಸಮತೋಲಿತ ಆಹಾರ ಸೇವಿಸುವುದು ಅಗತ್ಯವಾಗಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳೆವಣಿಗೆಗೆ ಅಗತ್ಯವಾದ ಪೌಷ್ಠಿಕಾಂಶಗಳನ್ನು ಒದಗಿಸುವಲ್ಲಿ ಕುಟುಂಬದೊಂದಿಗೆ ಅಂಗನವಾಡಿ ಮತ್ತು ಆರೋಗ್ಯ ಇಲಾಖೆಗಳ ಪಾತ್ರವೂ ಮಹತ್ವದ್ದಾಗಿದೆ. ಪೌಷ್ಠಿಕ ಆಹಾರ, ಆರೋಗ್ಯ, ಸ್ವಚ್ಚತೆ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ ಪ್ರಾಸ್ತಾವಿಕವಾಗಿ ಮಾತನಾಡಿ ೦ ದಿಂದ ೬ ವರ್ಷದ ಮಕ್ಕಳಲ್ಲಿ ಗರ್ಭಿಣಿಯರು, ಬಾಣಂತಿಯರು ಮತ್ತು ಕಿಶೋರಿಯರಲ್ಲಿ ಅಪೌಷ್ಠಿಕತೆ, ಕುಂಠಿತ ಬೆಳೆವಣಿಗೆ ರಕ್ತ ಹೀನತೆ ಹಾಗೂ ಕಡಿಮೆ ತೂಕದ ಮಕ್ಕಳ ಜನನ ಕಡಿಮೆಗೊಳಿಸುವ ಉದ್ದೇಶ ಈ ಪೊಷಣ್ ಮಾಸಾಚರಣೆಯದ್ದಾಗಿದೆ. ಪ್ರತಿ ವರ್ಷ ಸೆಪ್ಟೆಂಬರ ಮಾಹೆಯಲ್ಲಿ ಪ್ರಮುಖ ೫ ಆದ್ಯತೆಗಳೊಂದಿಗೆ ಆಚರಿಸಲ್ಪಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಅಲ್ಲದೇ ಶಿಶುಗಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಿ, ಮಕ್ಕಳ ಆರೋಗ್ಯಕರ ಬೆಳೆವಣಿಗೆಗೆ ಪೌಷ್ಠಿಕ ಆಹಾರದ ಮಹತ್ವವನ್ನು ತಿಳಿಸಲಾಯಿತು. ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮವು ಸಹ ನಡೆಸಲಾಯಿತು. ಪೌಷ್ಠಿಕ ಆಹಾರ ಕುರಿತು ಡಾ.ರಮೀತ ಬಿ.ಈ, ಮಹಿಳೆ, ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಕುರಿತು ನಾಗವೇಣಿ ನಾಯಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತದ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾ.ಪಂ ಇಒ ಸುಭಾಷ ಸಂಪಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಮಂಜುನಾಥ ಪರಸನ್ನವರ, ಶಿಶು ಅಭಿವೃದ್ದಿ ಯೋಜನಾಧಿಕಾರಿ ರಮೇಶ ಸೂಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನವ ಮತದಾರರ ನೋಂದಣಿಗೆ ಜಾಗೃತಿ: ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸೆಪ್ಟೆಂಬರ ೧೯ ಮತ್ತು ೨೦ ರಂದು ಹಮ್ಮಿಕೊಂಡ ನವ ಮತದಾರರ ವಿಶೇಷ ನೋಂದಣಿ ಅಭಿಯಾನದ ಕುರಿತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ೧೮ ವರ್ಷ ಪೂರೈಸುವ ನವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅರಿವು ಮೂಡಿಸಿ, ನೋಂದಣಿ ಪ್ರಕ್ರಿಯೆಯಲ್ಲಿ ಸಕ್ತಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು.