ಬಳ್ಳಾರಿ, ಜೂನ್ 19: ನಿವೇಶನ ವಿನ್ಯಾಸದ ಕಡತಗಳಿಗೆ ಅನುಮೋದನೆ ನೀಡಿಕೊಡುವ ಸಂಬಂಧ ₹3.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಸರ್ವೇಯರ್ ಶಾಂತಮೂರ್ತಿ ಹಾಗೂ ಅವರ ಸಹಾಯಕ ಮೊಹಮ್ಮದ್ ಸಾಜೀದ್ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಲೆಗೆ ಬೀಳಿಸಿ ಬಂಧಿಸಿದ್ದಾರೆ.
ವಾಳ್ಯಕಿ ಜನಾಂಗದ ಈರೇಶಿ (43) ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪ್ರವೀಣ್ ಕುಮಾರ್, ಕುಮಾರಸ್ವಾಮಿ, ರಘುನಾಥ ಹಾಗೂ ಬೃಂದಾ ಅವರಿಗೆ ಸೇರಿದ ಜಮೀನುಗಳ ಏಕ ಮತ್ತು ಬಹುನಿವೇಶನ ವಿನ್ಯಾಸದ ಕಡತಗಳಿಗೆ ಅನುಮೋದನೆ ದೊರಕಿಸಲು ಸಂಬಂಧಿತ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಈರೇಶಿ ಜಿಪಿಎ ಪಡೆದಿದ್ದರು ಎನ್ನಲಾಗಿದೆ.
ಈ ಕಡತಗಳಿಗೆ ಅನುಮೋದನೆ ನೀಡುವ ಸಂಬಂಧ ಸರ್ವೇಯರ್ ಶಾಂತಮೂರ್ತಿ ₹3.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 05/2026ರಡಿ ಭ್ರಷ್ಟಾಚಾರ ತಡೆ ಕಾಯ್ದೆ–1988 (ತಿದ್ದುಪಡಿ 2018)ರ ಕಲಂ 7(ಎ) ಅಡಿ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಮಧ್ಯಾಹ್ನ ಸುಮಾರು 12.30 ಗಂಟೆಗೆ ಬುಡಾ ಕಚೇರಿಯಲ್ಲಿ ಶಾಂತಮೂರ್ತಿ ಅವರು ತಮ್ಮ ಸಹಾಯಕ ಮೊಹಮ್ಮದ್ ಸಾಜೀದ್ ಮೂಲಕ ದೂರುದಾರರಿಂದ ₹3.50 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಕಾರ್ಯಾಚರಣೆಯಲ್ಲಿ ಇಬ್ಬರನ್ನೂ ವಶಕ್ಕೆ ಪಡೆದು ಲಂಚದ ಹಣವನ್ನು ಜಪ್ತಿ ಮಾಡಲಾಗಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಾಧೀಕ್ಷಕರಾದ ಸಿದ್ಧಪ್ಪ ಎಸ್. ಬೀಳಗಿ ಹಾಗೂ ಸಚಿನ್ ಎಸ್. ಚಲುವಾದಿ, ಪೊಲೀಸ್ ನಿರೀಕ್ಷಕ ಸುರೇಶ್ ಎಂ. ಭಾವಿಮನಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.
