ಬಳ್ಳಾರಿ,ಜು.16 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಅತ್ಯಂತ ತೀವ್ರಗತಿಯಲ್ಲಿ ಪ್ರಗತಿಯಲ್ಲಿದ್ದು, ಇದುವರೆಗೆ ಶೇ. 98.76 ರಷ್ಟು ಎಸ್‌ಐಆರ್ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿಯೂ ಆದ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ್ ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಒಟ್ಟು 2,79,144 ಮತದಾರರಿದ್ದು, ಮತದಾರರ ಪಟ್ಟಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಮನೆ ಮನೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, 98.01 ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸಮೀಕ್ಷೆಗಾಗಿ ಸಿದ್ಧಪಡಿಸಲಾದ ಎಸ್‌ಐಆರ್ ಗಣತಿ ನಮೂನೆಗಳನ್ನು ಮುದ್ರಿಸಿ, ಆಯಾ ಭಾಗದ ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿದೆ. ಜುಲೈ 29 ರ ವರೆಗೆ ಮನೆ ಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ನಡೆಯಲಿದೆ.
*ಅರ್ಜಿ ವಿತರಣೆ ಮತ್ತು ಡಿಜಿಟಲೀಕರಣದ ಪ್ರಗತಿ:*
ಕ್ಷೇತ್ರದಲ್ಲಿ ಒಟ್ಟು ಲಭ್ಯವಿರುವ ಮತದಾರರ ಪೈಕಿ 2,75,675 ಅರ್ಜಿಗಳನ್ನು (ಶೇ. 98.76) ಈಗಾಗಲೇ ಮತದಾರರಿಗೆ ವಿತರಿಸಲಾಗಿದೆ. ವಿತರಿಸಲಾದ ಅರ್ಜಿಗಳ ಪೈಕಿ 78,297 (ಶೇ. 28.05) ಅರ್ಜಿಗಳ ಡಿಜಿಟಲೀಕರಣ ಕಾರ್ಯವು ಮುಕ್ತಾಯಗೊಂಡಿದೆ. ಇದಲ್ಲದೆ, ನಾಗರಿಕರು ಸ್ವತಃ ಆನ್‌ಲೈನ್ ಮೂಲಕ 957 (ಶೇ. 0.34) ಅರ್ಜಿಗಳನ್ನು ನೇರವಾಗಿ ಸಲ್ಲಿಕೆ ಮಾಡಿದ್ದಾರೆ.
*ಅನರ್ಹ ಹಾಗೂ ಮರುಪರಿಶೀಲನೆ ಅಗತ್ಯವಿರುವ ಮತದಾರರ ವಿವರ:*
ಪರಿಶೀಲನೆಯ ಸಂದರ್ಭದಲ್ಲಿ ಒಟ್ಟು 2,555 ಮತದಾರರನ್ನು ಗೈರುಹಾಜರಿ, ಸ್ಥಳಾಂತರ, ನಕಲು, ಮರಣ ಹೊಂದಿದ ಹಾಗೂ ಇತರೆ ಸೇರಿದಂತೆ ವಿವಿಧ ವರ್ಗದಡಿ ಗುರುತಿಸಲಾಗಿದ್ದು, ಇವರಲ್ಲಿ 1,468 ಮರಣ ಹೊಂದಿದ ಮತದಾರರು, 823 ಶಾಶ್ವತವಾಗಿ ವಲಸೆ ಹೋದವರು, 211 ಈಗಾಗಲೇ ಹೆಸರು ನೋಂದಾಯಿತವಾಗಿರುವವರು, 29 ಲಭ್ಯವಿಲ್ಲದ / ಗೈರುಹಾಜರಾದ ಮತದಾರರು ಮತ್ತು 24 ಮಂದಿ ಇತರ ಕಾರಣಗಳು ಇದ್ದು, ಈ ಎಲ್ಲಾ ವಿವರಗಳನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಒಟ್ಟು 261 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಈ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾರ್ವಜನಿಕರು ತಮ್ಮ ಭಾಗದ ಬಿ.ಎಲ್.ಒ ಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಆಗಿರುವ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ್ ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.