.
ಬೆಳಗಾವಿ : ತಾಲೂಕಿನ ಸುಕ್ಷೇತ್ರ ಪಂತ ಬಾಳೇಕುಂದ್ರಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗುರು ಪೂರ್ಣಿಮೆಯನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ದತ್ತ ಮಹಾರಾಜರಿಗೆ ಅಭಿಷೇಕ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಬುಧವಾರ ಸಂಜೆಯಿಂದಲೇ ಪವಾಡ ಪುರುಷ ದತ್ತ ಮಹಾರಾಜರ ದರ್ಶನಕ್ಕಾಗಿ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಪಂತ ಬಾಳೇಕುಂದ್ರಿಗೆ ಆಗಮಿಸಿ ದೇವಸ್ಥಾನದಲ್ಲಿ ಜಮಾಯಿಸಿದರು. ರಾತ್ರಿಯಿಂದಲೇ ದತ್ತ ಮಹಾರಾಜರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳಿಗಾಗಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.
ಗುರುವಾರ ಬೆಳಗ್ಗಿನಿಂದಲೇ ಭಕ್ತರ ಆಗಮನ ಮತ್ತಷ್ಟು ಹೆಚ್ಚಾಗಿ, ಶ್ರೀ ದತ್ತ ಸಂಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಕರ್ನಾಟಕದ ವಿವಿಧ ಭಾಗಗಳ ಜೊತೆಗೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಗುರು ಪೂರ್ಣಿಮೆಯ ಪವಿತ್ರ ಆಚರಣೆಯಲ್ಲಿ ಪಾಲ್ಗೊಂಡರು.
ಅದೇ ರೀತಿ ಪಂತ ಬಾಳೇಕುಂದ್ರಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಭಕ್ತಿಭಾವದಿಂದ ಮಹಾಪ್ರಸಾದ ಸ್ವೀಕರಿಸಿದರು.
ಶಾಂತಿ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನಡೆದ ಗುರು ಪೂರ್ಣಿಮೆಯ ಆಚರಣೆ ಭಕ್ತರ ಮನಸ್ಸಿನಲ್ಲಿ ವಿಶೇಷ ಭಕ್ತಿಭಾವವನ್ನು ಮೂಡಿಸಿತು.
ಈ ವೇಳೆ ಪಂತ ಬಾಳೇಕುಂದ್ರಿ ಗ್ರಾಮದ ಯುವಕರು ದೇವಸ್ಥಾನಕ್ಕೆ ಬಂದ ಭಕ್ತಾಧಿಗಳಿಗೆ ಅನ್ನ ಪ್ರಸಾದ ಬಡಿಸುವುದರ ಮೂಲಕ ಭಕ್ತಿಗೆ ಪಾತ್ರರಾದರು.
