ಬಳ್ಳಾರಿ: 09:."ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮ್ಯಾನೇಜ್‌ಮೆಂಟ್ ಪದವೀಧರರು ಕೃತಕ ಬುದ್ಧಿಮತ್ತೆಯನ್ನು ಕೇವಲ ಒಂದು ತಾಂತ್ರಿಕ ವಿಷಯವಾಗಿ ನೋಡದೆ, ಉದ್ಯಮದ ಉಳಿವು ಮತ್ತು ಕಾರ್ಯತಂತ್ರದ ಪ್ರಮುಖ ಅಂಗವಾಗಿ ಅಳವಡಿಸಿಕೊಳ್ಳಬೇಕು" ಎಂದು ತಾಂತ್ರಿಕ ತಜ್ಞರು ಹಾಗೂ ಲೇಖಕರು ಆದ ಡಾ. ಎಸ್.ಎಂ. ಶಶಿಧರ್ ಅವರು ತಿಳಿಸಿದರು.
ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ (RYMEC) ಎಂ.ಬಿ.ಎ. ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ "ಆಡಳಿತ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ: ಭವಿಷ್ಯವನ್ನು ರೂಪಿಸುವ ತಂತ್ರಜ್ಞಾನಗಳು" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನೋಕಿಯಾ ಮತ್ತು ಕೊಡಾಕ್‌ನಂತಹ ಜಾಗತಿಕ ಕಂಪನಿಗಳ ಉದಾಹರಣೆಗಳನ್ನು ನೀಡಿದ ಅವರು, "ಬದಲಾಗುವ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಆಲೋಚನಾ ಶೈಲಿಯನ್ನು ಬದಲಾಯಿಸಿಕೊಳ್ಳದ ಉದ್ಯಮಗಳು ಮಾರುಕಟ್ಟೆಯಿಂದ ನಿರ್ನಾಮವಾಗುತ್ತವೆ. ಎಐ ತಂತ್ರಜ್ಞಾನವು ನಿಮ್ಮ ಆಲೋಚನಾ ಸಾಮರ್ಥ್ಯವನ್ನು ವಿಸ್ತರಿಸಬೇಕೇ ಹೊರತು, ನಿಮ್ಮ ಸ್ವತಂತ್ರ ಯೋಚನಾ ಶಕ್ತಿಯನ್ನು ಕಸಿದುಕೊಳ್ಳಬಾರದು." ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಡಾ. ತಿಮ್ಮನಗೌಡ ಅವರು ಕಾಲೇಜಿನ ಪರವಾಗಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. ವಿಭಾಗದ ೧೦೦ಕ್ಕೂ ಹೆಚ್ಚು ಎಂ.ಬಿ.ಎ ವಿದ್ಯಾರ್ಥಿಗಳು ಈ ವಿಶೇಷ ಉಪನ್ಯಾಸದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
