ನಿಪ್ಪಾಣಿ: ಸಾಹಿತ್ಯ ಕ್ಷೇತ್ರಕ್ಕೆ ಡಾ. ಅಣ್ಣಾ ಭಾವು ಸಾಠೆ ಅವರು ಅಪಾರ ಕೊಡುಗೆ ನೀಡಿದ್ದು, ಅಪ್ರತಿಮ ಹೋರಾಟಗಾರ, ಸಾಹಿತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಅನುಯಾಯಿಯಾಗಿದ್ದರು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಸಾಹಿತ್ಯ ರತ್ನ ಲೋಕಶಾಹಿರ್ ಡಾ. ಅಣ್ಣಾ ಭಾವು ಸಾಠೆ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಅಣ್ಣಾ ಭಾವು ಸಾಠೆ ಅವರು ಹಲವಾರು ಕ್ರಾಂತಿಗೀತೆಗಳು ಹಾಗೂ ಕಾದಂಬರಿಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತಮ್ಮ ಸಾಹಿತ್ಯದ ಮೂಲಕ ಕಾರ್ಮಿಕ ವರ್ಗ ಹಾಗೂ ಅಂಚಿನ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯ ಮಾಡಿದ್ದರು ಎಂದರು.
ಅಣ್ಣಾ ಭಾವು ಸಾಠೆ ಅವರ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಹಿತ್ಯದ ಮೂಲಕ ಅಸ್ಪೃಶ್ಯತೆ ನಿರ್ಮೂಲನೆ, ದಲಿತರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಅವರು ನಿರಂತರವಾಗಿ ಶ್ರಮಿಸಿದ್ದರು ಎಂದು ಹೇಳಿದರು.
ಅವರ ಸಾಮಾಜಿಕ ಹೋರಾಟ, ವಿಚಾರಧಾರೆ ಹಾಗೂ ಪ್ರಸಿದ್ಧ ಕಾದಂಬರಿಗಳ ಮಹತ್ವವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಅಣ್ಣಾ ಭಾವು ಸಾಠೆ ಅವರ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳು ಮುಂದಿನ ಪೀಳಿಗೆಗೂ ತಲುಪುವಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಅಣ್ಣಾಸಾಹೇಬ್ ಕೊಹಳೆ, ಸುಪ್ರಿಯಾ ಪಾಟೀಲ್, ರಾಜೇಂದ್ರ ಪಾಟೀಲ್, ಸುರೇಶ ಐಹೊಳೆ, ರಮೇಶ ಮಾದರ, ಸುನೀತಾ ಐಹೊಳೆ ಸೇರಿದಂತೆ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.