ಬೀಳಗಿ- ಕೇಂದ್ರದ ಬಿಜೆಪಿ ಸರ್ಕಾರ ದೇಶದ ಇಡಿ,ಸಿಬಿಐ ಮತ್ತು ಚುನಾವಣಾ ಆಯೋಗಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೇಸ್ ಅಧಿಕಾರದಲ್ಲಿರುವ ರಾಜ್ಯಗಳ ಜನಪರ ನಾಯಕರು ಮೇಲೆ ಇಡಿ ದಾಳಿ ಮಾಡುವ ಮೂಲಕ ಭಯದ ವಾತಾವರಣ ಸ್ರಷ್ಠಿಸುತ್ತಿದೆ ಮತ್ತು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ತನ್ನ ಅಧಿಕಾರ ಬಲದಿಂದ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಜೆ.ಟಿ. ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ ಅವರು
ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಅವರ ನಂತರ, ಇದೀಗ ನಮ್ಮ ನಾಡಿನ ಜನಪ್ರಿಯ ನಾಯಕ ಸತೀಶ್ ಜಾರಕಿಹೊಳಿ ಅವರನ್ನು ತೇಜೋವಧೆ ಮಾಡಲು ಮತ್ತು ಮಾನಸಿಕವಾಗಿ ಕುಗ್ಗಿಸಲು ಇಡಿ ಮೂಲಕ ಸಂಚು ರೂಪಿಸಲಾಗಿದೆ. ಶಾಸಕಾಂಗ ಹಾಗೂ ಆಡಳಿತ ವ್ಯವಸ್ಥೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಕೇಂದ್ರದ ಈ ರೀತಿಯ ಹಠಮಾರಿತನದ ನಡವಳಿಕೆಯನ್ನು ನಾವೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸುತ್ತೇವೆ ಎಂದರು.
ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ತಮ್ಮ ಬಿಜೆಪಿಯ ಮುಖಂಡರನ್ನು ಪರಿಶುದ್ಧರೆಂದು ಬಿಂಬಿಸಿ, ಎದುರಾಳಿ ನಾಯಕರನ್ನಷ್ಟೇ ಸಂಸ್ಥೆಗಳ ಮೂಲಕ ಸದೆಬಡಿಯಲು ಯತ್ನಿಸುತ್ತಿದ್ದಾರೆ.
ಪಶ್ಚಿಮ ಬಂಗಾಳ ಸೇರಿದಂತೆ ನಾನಾ ರಾಜ್ಯಗಳಲ್ಲಿ ಭ್ರಷ್ಟಾಚಾರದ ಆರೋಪ ಹೊಂದಿದ್ದ ನೂರಾರು ನಾಯಕರು ಬಿಜೆಪಿ ಬಾಗಿಲು ತಟ್ಟಿದ ತಕ್ಷಣ ಪಾವನರಾಗಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಇಸಿ, ಇಡಿ, ಸಿಬಿಐ ಹಾಗೂ ಆರ್‌ಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಗಳು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಸ್ಥಿತಿ ನಿರ್ಮಾಣವಾಗಿದೆ.
ಇವಿಎಂ ಯಂತ್ರಗಳ ಗೊಂದಲ, ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಮಾಡುವುದು ಹಾಗೂ ಹೆದರಿಸಿ ಪಕ್ಷಾಂತರ ಮಾಡಿಸುವ ಕುತಂತ್ರ ನಡೆದಿದೆ,ಬರುವ ಚುನಾವಣಾ ಕಣದಲ್ಲಿ ನಾಡಿನ ಹಾಗೂ ದೇಶದ ಜಾಗೃತ ಜನತೆ ಇಂತಹ ಅನ್ಯಾಯಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ.
ನಮ್ಮ ಭಾಗದ ಶಾಸಕ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಬೆನ್ನಿಗೆ ಎಲ್ಲಾ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಬಂಡೆಯಂತೆ ನಿಲ್ಲಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಬೆಳಗಾವಿ ಪ್ರಾಂತ ಸಂಚಾಲಕರಾದ ಮಹಾದೇವ ಹಾದಿಮನಿ ಮಾತನಾಡಿ
ಕೇಂದ್ರ ಸರ್ಕಾರದ ಸೂಚನೆಯಂತೆ ಇಡಿ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಸಚಿವ ಸತೀಶ್ ಜಾರಕಿಹೊಳಿ,ಸಂಸದೆ ಪ್ರಿಯಾಂಕಾ ಜಾರಕಿಹೊಳಿ,ರಾಹುಲ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಅಹಿಂಧ ನಾಯಕರನ್ನು ತೇಜೋವಧೆ ಮಾಡಲು ಯತ್ನಿಸಲಾಗುತ್ತಿದೆ; ಈ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ನಾವೆಲ್ಲರೂ ಜಾರಕಿಹೊಳಿ ಅವರಿಗೆ ನೈತಿಕವಾಗಿ ಹಾಗೂ ಹೋರಾಟದ ಮೂಲಕ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಪಡಿಯಪ್ಪ ಕರಿಗಾರ, ಸಂಗಪ್ಪ ಕಂದಗಲ್, ಸಿದ್ದು ಸಾರಾವರಿ, ಬಸವರಾಜ್ ಹಳ್ಳದಮನಿ,ರವಿ ಪಾಟೀಲ,ಅನೀಲ ಹಲ್ಯಾಳ ,ಯಲ್ಲಪ್ಪ ಮೇಟಿ ,ಸಿಕಂದರ್ ಹುದ್ದಾರ , ಅನಿಲ್ ಗಚ್ಚಿನಮನಿ, ಟಿ ವೈ ಜಾನಮಟ್ಟಿ, ರಾಜು ಬೋರ್ಜಿ, ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.