ಅಥಣಿ: ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಥಣಿ ತಾಲೂಕಿನಲ್ಲಿ ಮತ್ತಷ್ಟು ನಾಲ್ಕು ಎಐ (AI) ಆಧಾರಿತ ಸಂಚಾರ ಕ್ಯಾಮೆರಾಗಳು ಕಾರ್ಯಾರಂಭಿಸಿವೆ ಎಂದು ಅಥಣಿ ಪೊಲೀಸ್ ಇಲಾಖೆ ತಿಳಿಸಿದೆ.
ಈಗಾಗಲೇ ತಾಲೂಕಿನಲ್ಲಿ ಎರಡು ಎಐ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸಂಗೊಳ್ಳಿ ರಾಯಣ್ಣ ವೃತ್ತ, ಶಿವಯೋಗಿ ಸರ್ಕಲ್ (ಹಳ್ಯಾಳ ಸರ್ಕಲ್), ಜತ್ತ ರಸ್ತೆ ಚಮಕೇರಿ ಮಡ್ಡಿ ಕ್ರಾಸ್ ಹಾಗೂ ಮುರುಗುಂಡಿ ಪ್ರದೇಶಗಳಲ್ಲಿ ಹೊಸದಾಗಿ ನಾಲ್ಕು ಎಐ ಕ್ಯಾಮೆರಾಗಳನ್ನು ಅಳವಡಿಸಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಈ ಮೂಲಕ ಅಥಣಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ಕ್ಯಾಮೆರಾಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸೀಟ್ ಬೆಲ್ಟ್ ಬಳಸದಿರುವುದು, ಮೊಬೈಲ್ ಫೋನ್ ಬಳಸಿ ವಾಹನ ಚಲಾಯಿಸುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳನ್ನು ಎಐ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಪತ್ತೆಹಚ್ಚಲಿವೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೊಳಿ ಮನವಿ ಮಾಡಿದರು
