ಚನ್ನಮ್ಮನ ಕಿತ್ತೂರು: ಕ್ಷೇತ್ರವನ್ನು ಮಾದರಿಯಾಗಿ ಹಾಗೂ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಪ್ರತಿಪಾದಿಸಿದರು.
ಸ್ಥಳೀಯ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಒಟ್ಟು ರೂ 3.25 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ರವಿವಾರ ಚಾಲನೆ ನೀಡಿ, ಭೂಮಿಪೂಜೆ ನೆರವೇರಿಸಿದರು.
ಪಟ್ಟಣದ ವಿವಿಧ ಓಣಿಗಳಲ್ಲಿ ಸುಸಜ್ಜಿತ ಸಿಸಿ ರಸ್ತೆ, ಯುಜಿಡಿ (ಒಳಚರಂಡಿ) ವ್ಯವಸ್ಥೆ, ಚರಂಡಿ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಅವರು, "ಪಟ್ಟಣದ ಪ್ರತಿಯೊಂದು ವಾರ್ಡ್ನ ಅಗತ್ಯತೆಗಳನ್ನು ಗುರುತಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಯಾವುದೇ ತಾರತಮ್ಯವಿಲ್ಲದೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದ್ದು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅತ್ಯಗತ್ಯ" ಎಂದರು.
ಮುಂದುವರಿದು, "ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ನಿಗದಿತ ಸಮಯದೊಳಗೆ ಉತ್ತಮ ದರ್ಜೆಯ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಸಾರ್ವಜನಿಕರೂ ಸಹ ಕಾಮಗಾರಿಯ ಸ್ಥಳದಲ್ಲಿ ಗುಣಮಟ್ಟವನ್ನು ಪರಿಶೀಲಿಸಿ, ಸಹಕರಿಸಬೇಕು" ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಸದಸ್ಯ ದೌಲತ್ತ ಪರಂಡೇಕರ, ಕೃಷ್ಣಾ ಬಾಳೆಕುಂದ್ರಿ, ಅಸ್ಫಾಕ ಹವಾಲ್ದಾರ, ರವಿ ಲದ್ದಿಮಠ, ಅಭಿಯಂತರರು, ಗುತ್ತಿಗೆದಾರರು ಸೇರಿದಂತೆ ಪಟ್ಟಣದ ನಾಗರಿಕರು ಇದ್ದರು.
ಚಿತ್ರ: ಶಾಸಕರ ನೇತೃತ್ವದಲ್ಲಿ ಪಟ್ಟಣ ಪಂಚಾಯತ ಸದಸ್ಯ ದೌಲತ್ತ ಪರಂಡೇಕರ ಅವರು ಭೂಮಿಪೂಜೆ ನೆರವೇರಿಸಿದರು