ಧಾರವಾಡ ,09 : ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ಅಕ್ಟೋಬರ್ 23 ರಂದು ಮತದಾನ ನಡೆಯಲಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 97,398 ಮತದಾರರಿದ್ದಾರೆ. ಚುನಾವಣೆಯನ್ನು ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಒಟ್ಟು 137 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಮ್. ಜಾನಕಿ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6 ರವರೆಗೆ ಒಟ್ಟು 18 ಅಭ್ಯರ್ಥಿಗಳು ಉಮೇದುವಾರಿಕೆಗಳನ್ನು ಸಲ್ಲಿಸಿದ್ದರು. ಅಕ್ಟೋಬರ್ 09 ರಂದು 4 ಉಮೇದುವಾರರಾದ ಹಾವೇರಿ ಜಿಲ್ಲೆಯ ಆರ್. ಎಂ. ಕುಬೇರಪ್ಪ, ಸಲೀಮ ಮಹ್ಮದಹನೀಫ ಜವಳಿ, ಸುರೇಶ ಎಸ್. ಬಿಷ್ಟನಗೌಡರ ಹಾಗೂ ಹುಬ್ಬಳ್ಳಿಯ ಇಮ್ರಾನ ಕೂಡಲ ಅವರು ತಮ್ಮ ಉಮೇದುವಾರಿಕೆಗಳನ್ನು ಹಿಂಪಡೆದುಕೊಂಡಿರುತ್ತಾರೆ. ಅಂತಿಮ 14 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆಯಲ್ಲಿ ಇರುತ್ತಾರೆ ಎಂದು ಅವರು ತಿಳಿಸಿದರು.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮೋಹನ ಲಿಂಬಿಕಾಯಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಕನೂರ ಎಸ್.ವಿ. ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳಾದ ನಿಶಾಂತ ಬಂಕಾಪೂರ, ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ತಳವಾರ ಶಿವಕುಮಾರ, ಕಾಂತಕುಮಾರ್, ಬಸವರಾಜ ಕೊಟಗಿ, ಜೀಶಾನ ಅಹ್ಮದಖಾನ ಪಠಾಣ, ಸಂತೋಷ ವೆರ್ಣೇಕರ, ಉಮೇಶ ದೈವಜ್ಞ, ಕೃಷ್ಣ, ಜಿಶಾನ ಸಿರಸಂಗಿ, ಅಬ್ದುಲ ಮುನ್ನನ ಅವರು ಅಂತಿಮ ಚುನಾವಣಾ ಸ್ಪರ್ಧೆಯಲ್ಲಿ ಇರುತ್ತಾರೆ ಎಂದು ಹೇಳಿದರು.
*ಜಿಲ್ಲಾವಾರು ಮತದಾರರ ವಿವರ:* ಧಾರವಾಡ ಜಿಲ್ಲೆಯಲ್ಲಿ 35,117 ಮತದಾರರಲ್ಲಿ 20013 ಪುರುಷರು ಹಾಗೂ 15,104 ಮಹಿಳೆಯರು. ಗದಗ ಜಿಲ್ಲೆಯಲ್ಲಿ 21,594 ಮತದಾರರಲ್ಲಿ 13,757 ಪುರುಷರು ಹಾಗೂ 7837 ಮಹಿಳೆಯರು. ಹಾವೇರಿ ಜಿಲ್ಲೆಯಲ್ಲಿ 22,160 ಮತದಾರರಲ್ಲಿ 24,648 ಪುರುಷರು ಹಾಗೂ 15547 ಮಹಿಳೆಯರು. ಉತ್ತರ ಕನ್ನಡ ಜಿಲ್ಲೆಯಲ್ಲಿ 16039 ಮತದಾರರಲ್ಲಿ 8028 ಪುರುಷರು ಹಾಗೂ 8011 ಮಹಿಳೆಯರು. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 97398 ಪದವಿ ಮತದಾರರು ಇರುತ್ತಾರೆ.
ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 137 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 128 ಮುಖ್ಯ ಮತಗಟ್ಟೆಗಳು ಹಾಗೂ 9 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮತದಾನ ಕಾರ್ಯಕ್ಕೆ ಅಗತ್ಯವಿರುವ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಲು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
*ಮಾದರಿ ನೀತಿ ಸಂಹಿತೆ ಜಾರಿಗೆ ವಿವಿಧ ತಂಡಗಳ ರಚನೆ:* ಚುನಾವಣಾ ಪ್ರಕ್ರಿಯೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೊ ಸರ್ವೇಲೆನ್ಸ್ ತಂಡ, ವಿಡಿಯೊ ವೀಕ್ಷಣಾ ತಂಡ, ಮಾಧ್ಯಮ ಮೇಲ್ವಿಚಾರಣಾ ಸಮಿತಿ ಹಾಗೂ ದೂರುಗಳ ಮೇಲ್ವಿಚಾರಣಾ ಘಟಕಗಳನ್ನು ರಚಿಸಲಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ಈ ತಂಡಗಳಿಗೆ ಹಾಗೂ ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನದ ದಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಡ್ರೈ ಡೇ ಘೋಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ತಿಳಿಸಲಾದ ಎರಡು ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿಲ್ಲ ಎಂದು ಅವರು ತಿಳಿಸಿದರು.
*ಅಭ್ಯರ್ಥಿಗಳಿಗೆ ಚುನಾವಣಾ ಮಾರ್ಗಸೂಚಿ:*ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ನಿಯಮಗಳ ಕುರಿತು ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ. ಮತಗಟ್ಟೆಗಳ ಪಟ್ಟಿಗಳನ್ನು ಕನ್ನಡ ಮತ್ತು ಇಂಗ್ಲಿμï ಭಾμÉಗಳಲ್ಲಿ ಮೂರು ಪ್ರತಿಗಳಂತೆ ಒದಗಿಸಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆ-1951 ರ ಕಲಂ 127(ಎ)ರ ಪ್ರಕಾರ ಚುನಾವಣಾ ಕರಪತ್ರಗಳು ಮತ್ತು ಪೆÇೀಸ್ಟರ್‍ಗಳ ಮೇಲೆ ಮುದ್ರಕ ಹಾಗೂ ಪ್ರಕಾಶಕರ ಹೆಸರು ಮತ್ತು ವಿಳಾಸ ನಮೂದಿಸುವುದು ಕಡ್ಡಾಯವಾಗಿದೆ. ಮುದ್ರಿತ ದಾಖಲೆಗಳ ಪ್ರತಿಗಳನ್ನು ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸುವ ನಿಯಮದ ಬಗ್ಗೆಯೂ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ವಾಹನ ಪರವಾನಿಗೆ, ಸಾರ್ವಜನಿಕ ಸಭೆ ಆಯೋಜನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿವಿಧ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂಬ ಚುನಾವಣಾ ಆಯೋಗದ ನಿರ್ದೇಶನದ ಬಗ್ಗೆಯೂ ತಿಳಿಸಲಾಗಿದೆ.
*ಮತಪತ್ರದ ಮೂಲಕ ಚುನಾವಣೆ:* ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತಪತ್ರಗಳ ಮೂಲಕ ನಡೆಯಲಿದೆ. ಈ ಚುನಾವಣೆಯಲ್ಲಿ ಮೇಲಿನ ಯಾರೂ ಅಲ್ಲ (NOTA) ಆಯ್ಕೆಗೆ ಅವಕಾಶ ಇರುವುದಿಲ್ಲ. ಮತ ಎಣಿಕೆ ಕೇಂದ್ರ ಹಾಗೂ ಭದ್ರತಾ ಕೊಠಡಿಯನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಮತ ಎಣಿಕೆಯ ಸ್ಥಳ, ದಿನಾಂಕ ಹಾಗೂ ಸಮಯದ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ, ನ್ಯಾಯಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಮ್. ಜಾನಕಿ ಹೇಳಿದರು.