ಬಳ್ಳಾರಿ, ಆ. 29: ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 12ನೇ ಶತಮಾನವು ಮಹತ್ವದ ತಿರುವಿನ ಕಾಲವಾಗಿದ್ದು, ಈ ಅವಧಿಯಲ್ಲಿ ರಚನೆಯಾದ ವಚನಗಳು ಜನಸಾಮಾನ್ಯರ ಧ್ವನಿಯಾಗಿ, ಸಮಾಜದಲ್ಲಿದ್ದ ಮೌಢ್ಯ, ಜಾತಿ-ವರ್ಗ ಭೇದ ಹಾಗೂ ಮೇಲು-ಕೀಳು ಭಾವನೆಗಳನ್ನು ಪ್ರಶ್ನಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಸಾಹಿತಿ ಎರಿಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಾಜಿ ಪುರಸಭೆ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು ಅವರು, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಸೇರಿದಂತೆ ಅನೇಕ ಶಿವಶರಣರು ತಮ್ಮ ಅನುಭವ, ಚಿಂತನೆ ಹಾಗೂ ಸಾಮಾಜಿಕ ಕಳಕಳಿಯನ್ನು ಸರಳ ಮತ್ತು ನೇರ ಕನ್ನಡದಲ್ಲಿ ವ್ಯಕ್ತಪಡಿಸಿದ್ದು, ಅದುವೇ ವಚನ ಸಾಹಿತ್ಯದ ವಿಶೇಷತೆಯಾಗಿದೆ. ವಚನಗಳು ಜಾತಿ-ವರ್ಗಗಳ ಎಲ್ಲೆಗಳನ್ನು ಮೀರಿ ಸಮಾನತೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುವ ಮೂಲಕ ಸಮಾಜದಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವೀರಶೈವ ಮಹಾವಿದ್ಯಾಲಯದ ನಿವೃತ್ತ ಗ್ರಂಥಪಾಲಕ ಡಾ. ಬಸವರಾಜ ಗದಗಿನ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಗಡಿ ಭಾಗಗಳಲ್ಲಿ ಕನ್ನಡ ಜಾಗೃತಿ ಮೂಡಿಸುವುದರೊಂದಿಗೆ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಪರಿಷತ್ತು ದಾನಿಗಳ ಸಹಕಾರದಿಂದ ಹಲವು ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆ ಅತಿ ಹೆಚ್ಚು ದತ್ತಿ ಸಂಗ್ರಹಿಸಿರುವ ಕೀರ್ತಿಗೆ ಪಾತ್ರವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಳ್ಳಾರಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಪಿ. ಕಲ್ಲಪ್ಪ ಮಾತನಾಡಿ, ವಚನಗಳು ಎಲ್ಲ ವರ್ಗದ ಜನರಿಗೆ ದಾರಿದೀಪವಾಗಿದ್ದು, ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಮೂಲಕ ಬದುಕನ್ನು ಸನ್ಮಾರ್ಗದಲ್ಲಿ ನಡೆಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಾಜಿ ಪುರಸಭೆ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಸುಂಕಪ್ಪ ಮಾತನಾಡಿ, ವಚನಕಾರರು ತಮ್ಮ ವಚನಗಳ ಮೂಲಕ ಹೊಸ ಚಿಂತನೆ, ಹೊಸ ಭಾಷಾ ಅಭಿವ್ಯಕ್ತಿ ಹಾಗೂ ಹೊಸ ಸಾಮಾಜಿಕ ದೃಷ್ಟಿಕೋನವನ್ನು ನೀಡಿದ ಚಿಂತಕರಾಗಿದ್ದಾರೆ. ವಚನ ಸಾಹಿತ್ಯವು ಸಮಾನತೆ ಮತ್ತು ಮಾನವೀಯತೆಯ ಜೀವನಕ್ಕೆ ಆದರ್ಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಗುಲ್ಜರ್ ಪ್ರಾರ್ಥನೆ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷ ನಾಗರೆಡ್ಡಿ ಕೆ.ವಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ. ತಿಮ್ಮಪ್ಪ ವಚನ ಗಾಯನ ನಡೆಸಿಕೊಟ್ಟರು. ಬಿ. ನಾಗಲಿಂಗಮ್ಮ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಳಿಕ ಗಣ್ಯರನ್ನು ಸನ್ಮಾನಿಸಲಾಯಿತು. ತಾಲೂಕು ಘಟಕದ ಮಹಿಳಾ ಸದಸ್ಯೆ ಭಾಗ್ಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.