ರಾಮದುರ್ಗ: ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣಕ್ಕೆ ಮುಂದಾಗಿದ್ದು, ನಿರ್ಮಾಣದ ಸಂದರ್ಭದಲ್ಲಿ ರೈತರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಸಾಲಾಪೂರ ಹಾಗೂ ಮುದೇನೂರ ಗ್ರಾಮದಲ್ಲಿ ೧೧೦/೧೧ ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ, ಸಾಲಾಪೂರ ಗ್ರಾಮದಲ್ಲಿ ೧.೩೦ ಕೋಟಿ ವೆಚ್ಚದಲ್ಲಿ ಸಾಲಾಪೂರ ಗ್ರಾಮದಿಂದ ಲೋಕಾಪೂರ ಮುಖ್ಯ ರಸ್ತೆ ವರೆಗೆ ರಸ್ತೆ ನಿರ್ಮಾಣ ಹಾಗೂ ಮುದೇನೂರದಲ್ಲಿ ೪೦ ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಟಕುರ್ಕಿ ಹಾಗೂ ಮುದಕವಿಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಸಾಕಷ್ಟು ಗ್ರಾಮಗಳು ಬರುವದರಿಂದ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಮನಗಂಡು ಸಾಲಾಪೂರ ಹಾಗೂ ಮುದೇನೂರ ಗ್ರಾಮಗಳಲ್ಲಿ ಹೊಸದಾಗಿ ೧೧೦/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲಾಗುತ್ತಿದೆ. ಇದರ ಅವಧಿ ೧೮ ತಿಂಗಳಾಗಿದ್ದು, ನಿಗದಿತ ಸಮಯದಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಕಲ್ಪಿಸುವಲ್ಲಿ ಮುಂದಾಗಬೇಕು ಎಂದರು.
ರಾಜ್ಯ ಕಾಂಗ್ರೆಸ್ ಸರಕಾರ ಅಭಿವೃದ್ದಿಗೆ ಆದ್ಯತೆ ನೀಡಿ ಸಾಕಷ್ಟು ಜನಪರ ಯೋಜನೆಗಳ ಜೊತೆಗೆ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತಿದೆ. ಈಗಾಗಲೇ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು, ಹಂತ ಹಂತವಾಗಿ ಜನರ ಬೇಡಿಕೆಗಳನ್ನು ಈಡೆರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಮುದೇನೂರ ಗ್ರಾಮದ ವೇದಮೂರ್ತಿ ಗೌರಿಶಂಕರ ಸ್ವಾಮೀಜಿ ಮಾತನಾಡಿ, ರೈತರ ಹಾಗೂ ಜನರ ಹಿತ ಚಿಂತನೆಯನ್ನು ಬಯಸಿ ಶಾಸಕ ಅಶೋಕ ಪಟ್ಟಣ ಅವರು ಮುತವರ್ಜಿವಹಿಸಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಶ್ರಮಿಸಿದ್ದು, ಶಾಸಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಬೆಳಗಾವಿಯ ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಅಪ್ಪಣ್ಣ, ರಾಮದುರ್ಗ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಆನಂದ ನಾಯಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಕಾಶ ಕರಡಿ, ಮುಖಂಡ ಪ್ರದೀಪ ಪಟ್ಟಣ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಸಿದ್ಲಿಂಗಪ್ಪ ಶಿಂಗಾರಗೊಪ್ಪ, ಬಸನಗೌಡ ಪ್ಯಾಟಿಗೌಡ್ರ, ರಾಮಣ್ಣ ಬೀಡಕಿ, ಮಂಜುಳಾ ದೇವರಡ್ಡಿ, ಸೋಮಶೇಖರ ಹಂಪನ್ನವರ, ಗಿರೀಶ ಹಂಪಿಹೊಳಿ, ಮಲ್ಲಿಕಾರ್ಜುನ ರಾಮದುರ್ಗ, ಜನಕರಡ್ಡಿ ಹಕಾಟಿ, ಚಂದ್ರು ಹಕಾಟಿ, ಶಿವನಗೌಡ ಪವಾಡಿಗೌಡ್ರ, ನಿಂಗನಗೌಡ ಚಿಗದಮ್ಮನವರ, ಹಣಮಂತ ಅಂಗಡಿ, ಜಿ.ಎಸ್. ಪಾಟೀಲ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.