ಕೊಪ್ಪಳ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರೂ ಸಹ, ದುರ್ಬಳಕೆಯಾಗಿರುವ ₹187 ಕೋಟಿ ಹಣ ಸಂಪೂರ್ಣವಾಗಿ ನಿಗಮದ ಖಾತೆಗೆ ಜಮಾ ಆಗುವವರೆಗೆ ಬಿಜೆಪಿ ಹೋರಾಟ ಹಿಂಪಡೆಯುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕರ ನಿರ್ಣಯದಂತೆ ಲಿಂಗಸೂರಿನಿಂದ ಬಳ್ಳಾರಿವರೆಗೆ ಹತ್ತು ದಿನಗಳ ಕಾಲ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಆರಂಭವಾಗಿರುವ ಈ ಪಾದಯಾತ್ರೆಯು ಸೆಪ್ಟೆಂಬರ್ 4 ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಸೆಪ್ಟೆಂಬರ್ 6 ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ಮೂಲಕ ಪ್ರವೇಶಿಸಿ, ಗಂಗಾವತಿ ನಗರ ಹಾಗೂ ವಿವಿಧ ಭಾಗಗಳಲ್ಲಿ ಹಾದು ಕಂಪ್ಲಿ ಮಾರ್ಗವಾಗಿ ಬಳ್ಳಾರಿಗೆ ತೆರಳಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಬಹಿರಂಗ ಸಭೆಗಳನ್ನು ಆಯೋಜಿಸಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ನಿಗಮದಲ್ಲಿ ನಡೆದ ಭ್ರಷ್ಟಾಚಾರವನ್ನು ಜನರಿಗೆ ತಲುಪಿಸುವುದು ಹಾಗೂ ಹಣವನ್ನು ಮರಳಿ ನಿಗಮದ ಖಾತೆಗೆ ಜಮೆ ಮಾಡಿಸುವುದು ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಬಸವನಗೌಡ ಪಾಟೀಲ್, ವಿಜಯ್ ತಾಳಕೇರಿ, ಸುನಿಲ್ ಹೆಸರೂರು, ಸೋಮಶೇಖರ ಗೌಡ ಪಾಟೀಲ್, ಶಿವಪ್ಪ ವಾದಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.