ಬಳ್ಳಾರಿ. ಜೂ. 16: ಸೇತುಬಂಧ ಕಾರ್ಯಕ್ರಮದ ಪರೀಕ್ಷೆಯಲ್ಲಿ ಇಂಗ್ಲಿಷ್‌ನಲ್ಲಿ ಉತ್ತರಿಸಿದರೆ ಮಾತ್ರ 'ಎ' ಗ್ರೇಡ್ ಮತ್ತು ಕನ್ನಡದಲ್ಲಿ ಸರಿಯಾದ ಉತ್ತರ ಬರೆದರೂ 'ಬಿ' ಗ್ರೇಡ್ ನೀಡುತ್ತಿರುವುದು ಕೆಲವೊಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಶಿಕ್ಷಣ ಇಲಾಖೆಯ ಈ ಕನ್ನಡ ಭಾಷಾ ವಿರೋಧಿ ಮತ್ತು ತಾರತಮ್ಯದ ಕ್ರಮವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (AISEC), ಕರ್ನಾಟಕ ಘಟಕವು ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (AISEC) ಕರ್ನಾಟಕ ಅಧ್ಯಕ್ಷರಾದ ಅಲ್ಲಮಪ್ರಭು ಬೆಟ್ಟದೂರು ಕಿಡಿ ಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಬೆಟ್ಟದೂರು ಸರ್ಕಾರವು ದಶಕಗಳಿಂದ 5ನೇ ತರಗತಿಯಿಂದ ಇಂಗ್ಲಿಷ್ ಬೋಧಿಸುವ ನೀತಿಯನ್ನು ಜಾರಿಯಲ್ಲಿಟ್ಟು, ಒಂದನೇ ತರಗತಿಯಿಂದಲೇ ಗುಣಮಟ್ಟದ ಇಂಗ್ಲಿಷ್ ಕಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂಗ್ಲಿಷ್ ಬಾರದ ವಿದ್ಯಾರ್ಥಿಗಳು ಕನ್ನಡದಲ್ಲಿ ಉತ್ತರಿಸುವುದು ಅಪರಾಧವೇ? ಇಂಗ್ಲಿಷ್ ನಲ್ಲಿ ಮಕ್ಕಳು ಹಿಂದೆ ಬೀಳಲು ಕಾರಣ ಯಾರು? ಇಂಗ್ಲಿಷ್ ಭಾಷಾ ಶಿಕ್ಷಕರನ್ನು ನೇಮಕ ಮಾಡದ ಸರ್ಕಾರ, ಈಗ ತನ್ನ ವೈಫಲ್ಯದ ಹೊಣೆಯನ್ನು ಅಮಾಯಕ ವಿದ್ಯಾರ್ಥಿಗಳ ಮೇಲೆ ಹೊರಿಸಿ ಅವರನ್ನು ಶಿಕ್ಷಿಸುತ್ತಿರುವುದು ಅಕ್ಷಮ್ಯ. ಸರ್ಕಾರಿ ಶಾಲೆಗಳಲ್ಲಿ ಅವಶ್ಯವಿರುವಷ್ಟು ಇಂಗ್ಲಿಷ್, ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರಗಳು ಇಂತಹ ಅವೈಜ್ಞಾನಿಕ, ಶಿಕ್ಷಣ ವಿರೋಧಿ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
"ಈ ನೀತಿಯು ವಿದ್ಯಾರ್ಥಿಗಳು ಕನ್ನಡದಲ್ಲಿ ಕಲಿಯುವುದನ್ನು ನಿರುತ್ಸಾಹಗೊಳಿಸಿ, ಅವರನ್ನು ಬಲವಂತವಾಗಿ ಕೆ.ಪಿ.ಎಸ್ (KPS) ಮ್ಯಾಗ್ನೆಟ್ ಶಾಲೆಗಳತ್ತ ತಳ್ಳುವ ಹುನ್ನಾರವಾಗಿದೆ. ಇದು ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳಿಗೆ ಮರಣ ಶಾಸನವಾಗಿ ಪರಿಣಮಿಸಲಿದೆ.
ತಕ್ಷಣವೇ ಈ ತಾರತಮ್ಯದ ನೀತಿಯನ್ನು ಹಿಂಪಡೆಯಬೇಕು ಎಂದು ಅವರು ಶಿಕ್ಷಣ ಇಲಾಖೆಯನ್ನು ಮತ್ತು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
