ಧಾರವಾಡ,ಎ,೧೫ : ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿಕೊಟ್ಟವರು ಹಾಗೂ ಅವರು ಎದುರಿಸಿದ ಕಷ್ಟಗಳು ಅಪಾರವಾಗಿದ್ದು, ಸಮಾಜದ ಅನ್ಯಾಯ ಮತ್ತು ಅಸಮಾನತೆ ನಡುವೆಯೇ ಅವರು ಉನ್ನತ ಶಿಕ್ಷಣ ಪಡೆದು, ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ಸಂವಿಧಾನವನ್ನು ರಚಿಸಿದ್ದಾರೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಅವರು ಹೇಳಿದರು.
ಮಧ್ಯಾಹ್ನ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಸಂವಿಧಾನವನ್ನು ರಚಿಸಲು ಸುಮಾರು ೨ ವರ್ಷ ೧೧ ತಿಂಗಳು ೧೮ ದಿನಗಳ ಕಾಲ ನಿರಂತರ ಚರ್ಚೆ ನಡೆಸಿ ಈ ಮಹತ್ವದ ಗ್ರಂಥವನ್ನು ರೂಪಿಸಲಾಗಿದೆ. ಭಾರತದಲ್ಲಿ ಹಿಂದಿನಿಂದಲೂ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಇದ್ದ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಅಂಬೇಡ್ಕರ್ ಅವರು ಹೋರಾಡಿ, ಎಲ್ಲ ವರ್ಗಗಳಿಗೂ ಸಮಾನ ಹಕ್ಕುಗಳನ್ನು ಒದಗಿಸುವ ವ್ಯವಸ್ಥೆಯನ್ನು ನಿರ್ಮಿಸಿದರು. ಸಂವಿಧಾನವು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲದೆ, ಎಲ್ಲಾ ನಾಗರಿಕರ ಹಿತಕ್ಕಾಗಿ ರೂಪಿತವಾಗಿದೆ ಎಂದು ಅವರು ಹೇಳಿದರು.
ಮೀಸಲಾತಿ ವ್ಯವಸ್ಥೆಯು ಸಾಮಾಜಿಕ ನ್ಯಾಯ ಸಾಧಿಸಲು ಅಗತ್ಯವಾಗಿದ್ದು, ಇದು ಭಾರತದಲ್ಲಷ್ಟೇ ಅಲ್ಲದೆ ಅನೇಕ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಜಾರಿಯಲ್ಲಿದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶ ಎಂದು ಅವರು ಹೇಳಿದರು. ಹೆಣ್ಣುಮಕ್ಕಳ ಹಕ್ಕುಗಳ ವಿಷಯದಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರಿಗೆ ಆಸ್ತಿ ಹಕ್ಕು, ಮರು ವಿವಾಹ ಹಕ್ಕು ಹಾಗೂ ಸಮಾನ ಅವಕಾಶಗಳನ್ನು ನೀಡುವಲ್ಲಿ ಅವರ ಪಾತ್ರವನ್ನು ಸ್ಮರಿಸಬೇಕಾಗಿದೆ ಎಂದು ಸವಮಚಿವ ಸಂತೋಷ ಲಾಡ್ ಅವರು ತಿಳಿಸಿದರು.
ಇಂದಿನ ಯುವಕರು ಅಂಬೇಡ್ಕರ್ ಅವರ ವಿಚಾರಗಳನ್ನು ಸರಿಯಾಗಿ ಅರಿತುಕೊಂಡು, ಸಂವಿಧಾನದ ಮೌಲ್ಯಗಳನ್ನು ಸಮಾಜದಲ್ಲಿ ಪ್ರಚಾರ ಮಾಡುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಸಮಾನತೆ, ನ್ಯಾಯ ಮತ್ತು ಸಹಬಾಳ್ವೆಯ ಆಶಯಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶದಲ್ಲಿ ಸಾಮರಸ್ಯ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ನಮ್ಮಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ೩೦೦೦ ವರ್ಷ ಹಿಂದಗಡೆ ನೋಡಿಕೊಂಡು ಬಂದಾಗ ನಾವು ವರ್ಣಗಳಲ್ಲಿ ಬದುಕುತ್ತಾ ಇದ್ವಿ. ಆ ನಾಲ್ಕು ವರ್ಣಗಳಲ್ಲಿ ಅಸ್ಪೃಶ್ಯತೆಯ ಜನಗಳು ಇರಲಿಲ್ಲಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸುಮಾರು ಇಂತಹ ಶೋಷಿತ ವರ್ಗಗಳ, ದಮನೀತ ವರ್ಗಗಳ ಹಕ್ಕಿಗಾಗಿ ಈ ದೇಶದ ವ್ಯವಸ್ಥೆಗಾಗಿ ಸಂವಿಧಾನ ಬರೆದಿದ್ದಾರೆ ಎಂದು ಅವರು ಹೇಳಿದರು.
ದೇಶದ ಸಂವಿಧಾನ ಪೂರ್ವದಲ್ಲಿ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಆಗಲಿ, ಗಂಡನ ಆಸ್ತಿ ಆಗಲಿ, ಹಕ್ಕು ಇರಲಿಲ್ಲ. ಭಾರತ ದೇಶದಲ್ಲಿ ಇರತಕ್ಕಂತಹ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಇವತ್ತು ಗಂಡನ ಆಸ್ತಿ ಅಥವಾಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಸಿಗಬೇಕಾಗಿದ್ರೆ, ಬೇರೆ ಯಾರು ಮಾಡಿಲ್ಲ, ಮಾಡಿದ್ದರೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಮಾಡಿದ್ದಾರೆ ಎಂಬುವುದನ್ನು ಯಾರು ಮರೆಯಬಾರದು. ಇವತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರ, ಈ ದೇಶದಲ್ಲಿ ಸಂವಿಧಾನ ಉಳಿಬೇಕಾಗಿದ್ರೆ ನಾವೆಲ್ಲರೂ ಇದನ್ನ ಅರ್ಥ ಮಾಡ್ಕೋಬೇಕು. ಇದನ್ನ ಉಳಿಸಬೇಕು. ಅದಕ್ಕೆ ನೀವು ಜಾಗೃತರಾಗಬೇಕು. ಸಮಾಜದಲ್ಲಿ ಬದಲಾವಣೆ ತರಬೇಕು. ಅಂಬೇಡ್ಕರ್ ವಾದಗಳು, ವಿಚಾರಗಳು, ಉಳಿಬೇಕು. ಅದನ್ನ ಪಾಲಿಸಬೇಕು. ಗಟ್ಟಿಯಾಗಿ ಬೆಳೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಅವರು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪನೆಗೆ ಯುವ ಸಮೂಹ ಹಕ್ಕುಗಳ ಜೊತೆಗೆ ಜವಾಬ್ದಾರಿಗಳನ್ನೂ ಅರಿತುಕೊಳ್ಳಬೇಕೆಂದು ಮತ್ತು ಯುವಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದರಷ್ಟೇ ಸಾಕಾಗುವುದಿಲ್ಲ, ಆ ಹಕ್ಕುಗಳೊಂದಿಗೆ ಬಂದಿರುವ ಜವಾಬ್ದಾರಿಗಳನ್ನು ಸಹ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಜಾಸತ್ತಾತ್ಮಕ ವ್ಯವಸ್ಥೆ ಕೇವಲ ಚುನಾವಣೆಗಳಿಗೆ ಸೀಮಿತವಾಗಿಲ್ಲ, ಅದು ಸಮಾಜದ ಪ್ರತಿಯೊಂದು ಸಂಸ್ಥೆಯಲ್ಲಿಯೂ, ವೈವಿಧ್ಯತೆಯ ಗೌರವದಲ್ಲಿಯೂ ಪ್ರತಿಫಲಿಸಬೇಕು. ಹಾಗೂ ಶಿಕ್ಷಣವೇ ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಅಡೆತಡೆಗಳನ್ನು ದಾಟಿ ಸಾಧನೆ ಮಾಡುವುದರಿಂದ ಅಂಬೇಡ್ಕರ್ ಅವರ ಕನಸು ಸಾಕಾರಗೊಳ್ಳುತ್ತದೆ ಎಂದು ಅವರು ತಿಳಿಸಿದರು ನ್ಯಾಯಾಂಗ, ಶಿಕ್ಷಣ, ಉದ್ಯೋಗ, ಅಡಳಿತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಾಯಕತ್ವವನ್ನು ವಹಿಸುವತ್ತ ಯುವಕರು ಮುಂದಾಗಬೇಕು.
ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ನಮ್ಮ ನಡವಳಿಕೆ, ನಿರ್ಧಾರಗಳು ಮತ್ತು ಧೈರ್ಯದಲ್ಲಿ ಅವರ ಮೌಲ್ಯಗಳನ್ನು ಅನುಸರಿಸುವುದರ ಮೂಲಕ ಇರಬೇಕು ಎಂದು ಅವರು ಹೇಳಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಮಾತನಾಡಿ, ಸ್ವಾತಂತ್ರ್ಯದ ಸಮಯದಲ್ಲಿ ಕೆಲವು ವಿಶ್ವ ನಾಯಕರು ದೇಶವು ದೀರ್ಘಕಾಲ ಅಖಂಡವಾಗಿ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಸ್ವಾತಂತ್ರ್ಯವಾಗಿ ಸುಮಾರು ೮ ದಶಕಗಳ ನಂತರವೂ ಭಾರತವು ಸಮಗ್ರವಾಗಿ ಮತ್ತು ಗಟ್ಟಿಯಾಗಿ ಉಳಿದಿದೆ ಅಂದರೆ ಅದಕ್ಕೆ ಕಾರಣ ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವೇ ಎಂದು ಅವರು ತಿಳಿಸಿದರು.
ಒಂದು ಕುಟುಂಬ ಸುಗಮವಾಗಿ ನಡೆಯಲು ನಿಯಮಗಳು ಅಗತ್ಯವಾದಂತೆ, ದೇಶದ ಆಡಳಿತಕ್ಕೂ ಸಂವಿಧಾನದಲ್ಲಿ ನಿಗದಿಪಡಿಸಿದ ಕಾನೂನುಗಳು ಮತ್ತು ಕಟ್ಟಳೆಗಳು ಅತ್ಯವಶ್ಯಕವಾಗಿವೆ. ದೇಶದ ಎಲ್ಲಾ ಕಾರ್ಯಗಳು ಸಂವಿಧಾನಿಕ ಮಾನದಂಡಗಳ ಆಧಾರದ ಮೇಲೆಯೇ ನಡೆಯುತ್ತಿದೆ ಎಂದು ಅವರು ಹೇಳಿದರು. ಅಂಬೇಡ್ಕರ್ ಜಯಂತಿ ಸೇರಿದಂತೆ ಮಹಾನ್ ನಾಯಕರ ಜಯಂತಿಗಳನ್ನು ಎಲ್ಲ ವರ್ಗದ ಜನರು ತಮ್ಮ ಹಬ್ಬದಂತೆ ಆಚರಿಸಬೇಕು. ಕೆಲವೇ ಸಮುದಾಯಗಳಿಗೆ ಸೀಮಿತವಾಗದೇ, ಸಮಾಜದ ಪ್ರತಿಯೊಬ್ಬರೂ ಭಾಗವಹಿಸಿದಾಗ ಮಾತ್ರ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಸಂವಿಧಾನದ ಮಹತ್ವವನ್ನು ಶಾಲೆ, ಕಾಲೇಜು ಮತ್ತು ಮನೆಮನೆಗಳಲ್ಲಿ ಬೋಧಿಸುವುದು ಅಗತ್ಯ. ಇದರ ಅರಿವು ಮೂಡಿದಾಗ ಮಾತ್ರ ನಾಗರಿಕರು ಜವಾಬ್ದಾರಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಹುಬ್ಬಳ್ಳಿ ಜೆ.ಜಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಲ್ಲಮ್ಮ ಯಾಟಗಲ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಪ್ರಧಾನ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು. ಎಡಿಸಿ ಗೀತಾ ಸಿ.ಡಿ ಅವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿದರು. ಪ್ರವೀಣ ಮಸಕಿ ಅವರು ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ. ಸನ್ನೇರಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಬೌದ್ದ ಬಿಕ್ಕುಗಳಿಂದ ಬೌದ್ಧ ನಮನ ಮತ್ತು ಪ್ರಾರ್ಥನೆ ಜರುಗಿತು.
ವೇದಿಕೆಯಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಅಡಿವೇಶ ಗಿರೆಪ್ಪಾ ಇಟಗಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಮಹಾನಗರ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಮಾಜಿ ಸಂಸದ ಪೋ.ಜಿ.ಸನದಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಎಸಿ ಶಾಲಂ ಹುಸೇನ್, ತಹಸಿಲ್ದಾರ ಡಾ.ಡಿ.ಎಚ್.ಹೂಗಾರ, ತಾ.ಪಂ.ಇಓ ಗಂಗಾಧರ ಕಂದಕೂರ ಸೇರಿದಂತೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸದಸ್ಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರು, ಹಿಂದುಳಿದ ವರ್ಗಗಳ ಪ್ರಮುಖರು, ವಿದ್ಯಾರ್ಥಿಗಳು, ಮಹಿಳೆಯರು ಸಾರ್ವಜನಿಕರು ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸ್.ಎಸ್.ಎಲ್.ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸದಸ್ಯರು, ದಲಿತ ಚಿಂತಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜದ ಹಿರಿಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು
ಸಚಿವ ಸಂತೋಷ ಲಾಡ್ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ ನೇ ಜಯಂತಿ ನಿಮಿತ್ತ ಧಾರವಾಡದ ಜುಬ್ಲಿ ವೃತ್ತದ ಬಳಿ ಇರುವ ಸಂವಿಧಾನ ಶಿಲ್ಪಿ, ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋ? ಲಾಡ್, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಲಾರ್ಪಣೆ ಮಾಡಿದರು.
ಡಾ.ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನ ರಚನೆ ಮೂಲಕ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿಕೊಟ್ಟಿದ್ದಾರೆ : ಸಚಿವ ಸಂತೋಷ ಎಸ್.ಲಾಡ್


