ಬೆಂಗಳೂರು26: 10 ವರ್ಷ ಕೊಟ್ಟಿದ್ದೀರಿ. ಇದೀಗ ಬದಲಾವಣೆಯತ್ತ ಮುಖ ಮಾಡಿ ಎಂದು ಮತದಾರರಿಗೆ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಅತೀದೊಡ್ಡ ಫಲಿತಾಂಶ ಬರುವ ವಿಶ್ವಾಸವಿದೆ. ವಿಧಾನಸಭಾ ಚುನಾವಣೆಯಲ್ಲಿ ನುಡಿದಂತೆ ನಡೆದಿದ್ದೇವೆ. ಅದರಿಂದ ಜನರು ಸಂತಸಗೊಂಡಿದ್ದಾರೆ. ಮಹಿಳೆಯರು ಪಕ್ಷ ಎಂಬ ರೇಖೆ ದಾಟಿ ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅತ್ಯಂತ ಉತ್ತಮ ಪ್ರಣಾಳಿಕೆಯನ್ನು ನೀಡಿದ್ದು, ಮೊದಲ ಬಾರಿಗೆ ಮತ ಹಾಕುತ್ತಿರುವ ಯುವಕರು ಬದಲಾವಣೆಯತ್ತ ಮುಖ ಮಾಡಬೇಕು. 10 ವರ್ಷ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೀರಿ. ಇದೀಗ ಬದಲಾವಣೆಯತ್ತ ಹೆಜ್ಜೆ ಹಾಕಬೇಕೆಂದು ತಿಳಿಸಿದರು.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕದ 14 ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿರುವುದರಿಂದ ಕನ್ನಡದಲ್ಲಿಯೇ ಸಂದೇಶ ಪ್ರಕಟಿಸಿ ಮನವಿ ಮಾಡಿದ್ದಾರೆ.